ನವದೆಹಲಿ:ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಕ್ವಾರ್ಟರ್ಫೈನಲ್ ಹಂತ ತಲುಪಿರುವ ಕರ್ನಾಟಕ ತಂಡಕ್ಕೆ ಬಲಿಷ್ಠ ಪಂಜಾಬ್ ಎದುರಾಳಿಯಾಗಿದ್ದು, ಹ್ಯಾಟ್ರಿಕ್ ಪ್ರಶಸ್ತಿಗೆ ಇನ್ನು ಮೂರು ಗೆಲುವು ಮಾತ್ರ ಬಾಕಿಯಿದೆ.
ಜನವರಿ 26 ರಂದು ಮಧ್ಯಾಹ್ನ 12ಕ್ಕೆ ಈ ಪಂದ್ಯ ಅಹಮದಾಬಾದಿನ ಸರ್ದಾರ್ ವಲ್ಲಭಾಯ್ ಪಟೇಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಟೂರ್ನಿಯಲ್ಲಿ ಲೀಗ್ ಪಂದ್ಯಗಳು ಕೊನೆಗೊಳ್ಳುವವರೆಗೂ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸುವುದೇ ಕಷ್ಟ ಎನ್ನಲಾಗಿತ್ತು. ಸದ್ಯ ಕ್ವಾರ್ಟರ್ಫೈನಲ್ ತಲುಪಿರುವ ಎಂಟರ ಹಂತದ ಪಂದ್ಯಗಳ ಎದುರಾಳಿಗಳ ಪಟ್ಟಿ ಸಿದ್ದುಗೊಂಡಿದೆ. ಮೊದಲ ಕ್ವಾರ್ಟರ್ಫೈನಲ್ನಲ್ಲಿ ಕರ್ನಾಟಕಕ್ಕೆ ಪಂಜಾಬ್ ಸವಾಲು ಒಡ್ಡಲಿದೆ. ಅಲ್ಲದೆ, ಗ್ರೂಪ್ ಹಂತದ ಲೀಗ್ನಲ್ಲಿ ಪಂಜಾಬ್ ವಿರುದ್ಧ ಕರ್ನಾಟಕ ಹೀನಾಯ ಸೋಲನುಭವಿಸಿತ್ತು.
ಈ ಎರಡು ತಂಡಗಳ ಜೊತೆಗೆ ತಮಿಳುನಾಡು, ಹಿಮಾಚಲ ಪ್ರದೇಶ, ಹರಿಯಾಣ, ಬರೋಡಾ, ರಾಜಸ್ಥಾನ ಮತ್ತು ಬಿಹಾರ ತಂಡಗಳು ಕ್ವಾರ್ಟರ್ಫೈನಲ್ ಪ್ರವೇಶಿಸಿವೆ. ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ರನ್ರೇಟ್ ಆಧಾರದಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದು, ಉಳಿದವು ತಮ್ಮ ಗುಂಪುಗಳಲ್ಲಿ ಅಗ್ರಸ್ಥಾನ ಪಡೆದುಕೊಳ್ಳುವ ಮೂಲಕ ನೇರವಾಗಿ ಈ ಹಂತಕ್ಕೆ ಪ್ರವೇಶಿವೆ.
41 ಬಾರಿ ಚಾಂಪಿಯನ್ ಆಗಿದ್ದ ಮುಂಬೈ ಈ ಟೂರ್ನಿಯಿಂದ ಹೊರ ಬೀಳುವ ಮೂಲಕ ತೀವ್ರ ಅಚ್ಚರಿ ಮೂಡಿಸಿದೆ. ಒಂದೇ ಒಂದು ಪಂದ್ಯವನ್ನು ಗೆಲುವು ಸಾಧಿಸುವ ಮೂಲಕ ಕೊನೆಯ ಸ್ಥಾನ ಗಳಿಸಿ ನಿರಾಸೆ ಮೂಡಿಸಿದೆ. ಹಾಗೆಯೇ ಬಲಿಷ್ಠ ದೆಹಲಿ, ಹೈದರಾಬಾದ್, ಉತ್ತರ ಪ್ರದೇಶ ತಂಡಗಳೂ ಹೊರ ಬಿದ್ದಿವೆ.
ಕ್ವಾರ್ಟರ್ಫೈನಲ್ ಪಂದ್ಯಗಳು (ಮಧ್ಯಾಹ್ನ 12ರಿಂದ ಆರಂಭ)
- ಜ.26 – :ಕರ್ನಾಟಕ ವಿರುದ್ಧ ಪಂಜಾಬ್
- ಜ.26 – :ತಮಿಳುನಾಡು ವಿರುದ್ಧ ಹಿಮಾಚಲ ಪ್ರದೇಶ
- ಜ.27 – :ಹರಿಯಾಣ ವಿರುದ್ಧ ಬರೋಡಾ
- ಜ.27 – :ರಾಜಸ್ಥಾನ ವಿರುದ್ಧ ಬಿಹಾರ
ಸೆಮಿಫೈನಲ್ ಪಂದ್ಯಗಳು ಜ. 29ರಂದು ಮಧ್ಯಾಹ್ನ 12ಕ್ಕೆ ಒಂದು ಪಂದ್ಯ, ಸಂಜೆ 7ಕ್ಕೆ ಮತ್ತೊಂದು ಪಂದ್ಯ ನಡೆಯಲಿದೆ. ಫೈನಲ್ ಪಂದ್ಯ ಜನವರಿ 31ರಂದು ಸಂಜೆ 7ಕ್ಕೆ ನಡೆಯಲಿದೆ.