ಸಿಡ್ನಿ :10ನೇ ಆವೃತ್ತಿ ಬಿಗ್ ಬ್ಯಾಷ್ ಲೀಗ್ನ (ಬಿಬಿಎಲ್) ಫೈನಲ್ ಪಂದ್ಯದಲ್ಲಿ ಪರ್ತ್ ಸ್ಕಾರ್ಚರ್ಸ್ ತಂಡವನ್ನು ಬಗ್ಗುಬಡಿದ ಸಿಡ್ನಿ ಸಿಕ್ಸರ್ಸ್ ಸತತ ಎರಡನೇ ಬಾರಿ ಹಾಗೂ ಒಟ್ಟಾರೆ 3ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಶನಿವಾರ (ಫೆ.6) ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಸಿಡ್ನಿ, 20 ಓವರ್ನಲ್ಲಿ 6 ವಿಕೆಟ್ ಕಳೆದುಗೊಂಡು 188 ರನ್ ಗಳಿಸಿತ್ತು. ಬೃಹತ್ ಮೊತ್ತ ಬೆನ್ನಟ್ಟಿದ ಪರ್ತ್ 9 ವಿಕೆಟ್ಗೆ 161 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ ಸಿಡ್ನಿ ಸಿಕ್ಸರ್ ತಂಡ 27 ರನ್ಗಳ ರೋಚಕ ಗೆಲುವು ಸಾಧಿಸಿತು.
ಸಿಡ್ನಿ ತಂಡದ ಪರ ಆರಂಭಿಕ ಜೇಮ್ಸ್ ವಿನ್ಸ್ ಅಮೋಘ ಅರ್ಧಶತಕ (95, 10*4, 3*6) ಬಾರಿಸಿ ಮಿಂಚುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಜೋಷ್ ಫಿಲಿಪ್ಪೆ, ಡೇನಿಯಲ್ ಹ್ಯೂಸ್ 13, ಮೋಯಿಸ್ ಹೆನ್ರಿಕ್ಸ್ 18, ಜೋರ್ಡನ್ ಸಿಲ್ಕ್ 17*, ಡೇನಿಯಲ್ ಕ್ರಿಶ್ಚಿಯನ್ 20, ಕಾರ್ಲೋಸ್ ಬ್ರಾತ್ವೇಟ್ 10 ರನ್ ಗಳಿಸಿದರು. ಪರ್ತ್ನ ಜಾಯ್ ರಿಚರ್ಡ್ಸ್ಸನ್, ಆ್ಯಂಡ್ರ್ಯೂ ಟೈ ತಲಾ 2, ಫವಾದ್ ಅಹ್ಮದ್ 1 ವಿಕೆಟ್ ಕಿತ್ತರು.
ಗುರಿ ಬೆನ್ನಟ್ಟಿದ ಪರ್ತ್ ಸ್ಕಾರ್ಚರ್ಸ್ ಯಾವೊಬ್ಬ ಆಟಗಾರನಿಂದಲೂ ಉತ್ತಮ ಪ್ರದರ್ಶನ ತೋರಲಿಲ್ಲ. ಕ್ಯಾಮರೂನ್ ಬೆನ್ಕ್ರಾಫ್ಟ್ 30, ಲಿಯಾಮ್ ಲಿವಿಂಗ್ಸ್ಟೋನ್ 20, ಜೋಷ್ ಇಂಗ್ಲಿಷ್ 22, ಮಿಚೆಲ್ ಮಾರ್ಷ್ 11, ಟರ್ನರ್ 11, ಹಾರ್ಡಿ 26 ರನ್ ಬಾರಿಸಿದರು. ಸಿಡ್ನಿಯ ಜ್ಯಾಕ್ಸನ್ ಬರ್ಡ್, ಸೀನ್ ಅಬಾಟ್, ಕ್ರಿಶ್ಚಿಯನ್ ತಲಾ 2, ಡ್ವೇನ್ ಡ್ವಾರ್ಷಿಯಸ್ 3 ಪಡೆದು ಮಿಂಚಿದರು. ಜೇಮ್ಸ್ ವಿನ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜರಾದರೆ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಜೋಷ್ ಫಿಲಿಪ್ಪೆ ಪಡೆದುಕೊಂಡರು.