ನವದೆಹಲಿ: ಮುಂಬರುವ ಟ್ವೆಂಟಿ-20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ಮುಖ್ಯ ತರಬೇತುದಾರ ರವಿಶಾಸ್ತ್ರಿ ಅವಧಿ ಮುಕ್ತಾಯವಾಗಲಿದೆ. ಈ ಹಿನ್ನೆಲೆ ವಿವಿಎಸ್ ಲಕ್ಷ್ಮಣ್ಗೆ ಭಾರತೀಯ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಬಿಸಿಸಿಐ ಕೇಳುವ ಸಾಧ್ಯತೆಯಿದೆ.
ಹೊಸ ಕೋಚ್ ಹುಡುಕಾಟದ ಪ್ರಕ್ರಿಯೆ ಪ್ರಾರಂಭಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ), ಮಾಜಿ ಆಟಗಾರರಾದ ಅನಿಲ್ ಕುಂಬ್ಳೆ ಹಾಗೂ ವಿವಿಎಸ್ ಲಕ್ಷ್ಮಣ್ ಅವರಲ್ಲಿ ಅರ್ಜಿ ಸಲ್ಲಿಸುವಂತೆ ಮನವಿ ಸಲ್ಲಿಸಲು ಮುಂದಾಗಿದೆ ಎಂಬ ಸುದ್ದಿ ಹೊರ ಬಿದ್ದಿದೆ.
2016-17ರ ನಡುವೆ ಒಂದು ವರ್ಷದ ಕಾಲ ಅನಿಲ್ ಕುಂಬ್ಳೆ ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆ ವಹಿಸಿದ್ದರು. ಆದರೆ, ನಾಯಕ ವಿರಾಟ್ ಕೊಹ್ಲಿ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಕೋಚ್ ಸ್ಥಾನವನ್ನು ತೊರೆದಿದ್ದರು.
ಈಗ ಸೌರವ್ ಗಂಗೂಲಿ ನೇತೃತ್ವದ ಬಿಸಿಸಿಐ, ಮತ್ತೊಮ್ಮೆ ಅನಿಲ್ ಕುಂಬ್ಳೆ ಅವರತ್ತ ಮುಖ ಮಾಡುವ ಸಾಧ್ಯತೆಯಿದೆ. 2016 ರಲ್ಲಿ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ), ಕುಂಬ್ಳೆ ಅವರನ್ನು ಕೋಚ್ ಸ್ಥಾನಕ್ಕೆ ಶಿಫಾರಸು ಮಾಡಿತ್ತು.