ದುಬೈ: ಟಿ20 ವಿಶ್ವಕಪ್ನಲ್ಲಿ ಸ್ಟೈಲಿಸ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಭಾರತ ತಂಡದ ಗೇಮ್ ಚೇಂಜರ್ ಆಗಬಹುದು ಎಂದು ಪಾಕಿಸ್ತಾನ ಮಾಜಿ ನಾಯಕ ವಾಸೀಂ ಅಕ್ರಮ್ ಹೇಳಿದ್ದಾರೆ. ಮುಂಬೈ ಸ್ಟಾರ್ ಪವರ್ ಪ್ಲೇ ನಂತರ ನವೀನ ರೀತಿಯ 360 ಡಿಗ್ರಿ ಹೊಡೆತಗಳನ್ನು ಪ್ರಯೋಗಿಸಲು ಸಮರ್ಥರಾಗಿರುವುದರಿಂದ ಅವರು ತುಂಬಾ ವಿಶೇಷ ಆಟಗಾರನನ್ನಾಗಿ ಮಾಡಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಅಕ್ಟೋಬರ್ 24 ರಂದು ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ಟಿ20 ವಿಶ್ವಕಪ್ ಅಭಿಯಾನ ಆರಂಭಭಿಸಲಿದೆ. ಹೈವೋಲ್ಟೇಜ್ ಪಂದ್ಯಕ್ಕೆ ಇನ್ನೊಂದು ದಿನ ಬಾಕಿಯುಳಿದಿದೆ. ಆದರೆ ಈಗಲೇ ಸೋಲು ಗೆಲುವಿನ ಲೆಕ್ಕಾಚಾರ, ಮಿಂಚಬಹುದಾದ ಬ್ಯಾಟರ್, ಬೌಲರ್ಗಳ ಬಗ್ಗೆ ವಿಶ್ಲೇಷಣೆ ಆರಂಭವಾಗಿದೆ. ಭಾರತ ತಂಡದ ವಿರುದ್ಧ ಪಾಕಿಸ್ತಾನ ವಿಶ್ವಕಪ್ನಲ್ಲಿ ಆಡಿರುವ ಎಲ್ಲಾ 5 ಪಂದ್ಯಗಳಲ್ಲೂ ಸೋಲು ಕಂಡಿರುವುದು ಮುಂಬರುವ ಪಂದ್ಯದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
ಸೂರ್ಯಕುಮಾರ್ ಯಾದವ್ ಭಾರತ ತಂಡದ ಗೇಮ್ ಚೇಂಜರ್. ಅವರು ಪವರ್ ಪ್ಲೇ ನಂತರ ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲರು. ನಾನು ಅವರ ಶಾಟ್ಸ್ ನೋಡಿದ್ದೇನೆ. ನಾನು ಕೆಕೆಆರ್ ಮೆಂಟರ್ ಆಗಿದ್ದ ವೇಳೆ ಅವರು ನನ್ನ ಜೊತೆ ಇದ್ದರು. ಈಗ ಅವರೂ ಉತ್ತಮವಾಗಿ ಸುಧಾರಣೆ ಕಂಡಿದ್ದಾರೆ ಎಂದು ಆಜ್ ತಕ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
ವಾಸ್ತವವಾಗಿ ಸೂರ್ಯಕುಮಾರ್ ಕಳೆದ ಒಂದು ದಶಕದಲ್ಲಿ ಬಿಸಿಸಿಐ ನಿರ್ಮಿಸಿದ ಸದೃಢ ಡೊಮೆಸ್ಟಿಕ್ ಕ್ರಿಕೆಟ್ ರಚನೆಯಿಂದ ಹೊರಬಂದಿರುವ ಒಂದು ಅತ್ಯುತ್ತಮ ಉತ್ಪನ್ನ ಎಂದು ಅಕ್ರಮ್ ಭಾವಿಸಿದ್ದಾರೆ.
ಭಾರತೀಯ ದೇಶಿ ಕ್ರಿಕೆಟ್ ಅತ್ಯುತ್ತಮವಾಗಿದೆ. ಬಿಸಿಸಿಐ ದೇಶಿ ಕ್ರಿಕೆಟ್ ಮೇಲೆ ಸಾಕಷ್ಟು ಹೂಡಿಕೆ ಮಾಡಿದೆ. ಇದೀಗ ಅದು ಫಲ ನೀಡುತ್ತಿದೆ ಎಂದು ಹಿಂದೊಮ್ಮೆ ಅಜಿಂಕ್ಯ ರಹಾನೆ ಹೇಳಿದ್ದನ್ನು ನಾನು ಕೇಳಿದ್ದೇನೆ ಎಂದು ಸೂರ್ಯಕುಮಾರ್ ಅಂತಹ ಆಟಗಾರರ ಬೆಳವಣಿಗೆಗೆ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ರನ್ನು ಹೋಲಿಕೆ ಮಾಡುವುದರ ಕುರಿತು ಮಾತನಾಡಿದ ಅಕ್ರಮ್, ವಿರಾಟ್ಗೆ ವಿರಾಟ್ ಸಮ, ಆತನ ವಿಶ್ವ ಶ್ರೇಷ್ಠ ಕ್ರಿಕೆಟಿಗ. ಬಾಬರ್ ಅಜಮ್ ಈಗಷ್ಟೇ ನಾಯಕತ್ವವನ್ನ ಸ್ವೀಕರಿಸಿದ್ದಾರೆ. ಅಲ್ಲದೆ ಅವರೂ ನೋಡಲು ಒಳ್ಳೆಯ ಆಟಗಾರ. ಅವರು ಟಿ20, ಏಕದಿನ ಸೇರಿದಂತೆ ಎಲ್ಲಾ ಸ್ವರೂಪದಲ್ಲೂ ಸ್ಥಿರತೆ ಹೊಂದಿದ್ದಾರೆ. ಆತ ವೇಗವಾಗಿ ಕಲಿಯುವ ಆಟಗಾರನಾಗಿದ್ದು, ನಾಯಕತ್ವದ ಗುಣಗಳನ್ನು ಕಲಿಯುತ್ತಿದ್ದಾರೆ. ಈ ಪಯಣದಲ್ಲಿ ಅಂತಿಮವಾಗಿ ಕೊಹ್ಲಿ ಮೀರಿಸಿದ ಎತ್ತರವನ್ನು ಬಾಬರ್ ಮುಟ್ಟಲಿದ್ದಾರೆ ಎಂದು ತಮ್ಮ ದೇಶದ ಕ್ರಿಕೆಟಿಗನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:ಕ್ವಾಲಿಫೈಯರ್ ಮುಕ್ತಾಯ: ಸೂಪರ್ 12 ಟೀಂಗಳು, ಭಾರತ ತಂಡದ ವೇಳಾಪಟ್ಟಿ ಹೀಗಿದೆ ನೋಡಿ