ಮ್ಯೂನಿಚ್ (ಜರ್ಮನಿ):ಗಾಯಗೊಂಡು ತಿಂಗಳಿನಿಂದ ಕ್ರಿಕೆಟ್ ಮೈದಾನದಿಂದ ದೂರ ಉಳಿದಿರುವ ಭಾರತ ತಂಡದ ಅಗ್ರಕ್ರಮಾಂಕದ ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್, ಜರ್ಮನಿಯಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದನ್ನು ಅವರೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಪಾದದ ಗಾಯಕ್ಕೆ ತುತ್ತಾಗಿರುವ ಭಾರತ ಕ್ರಿಕೆಟಿಗ ಹೆಚ್ಚಿನ ಚಿಕಿತ್ಸೆಗಾಗಿ ಜರ್ಮನಿಗೆ ಈಚೆಗೆ ತೆರಳಿದ್ದರು. ಅದರಂತೆ ಜನವರಿ 17 ರಂದು ಮ್ಯೂನಿಚ್ನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಪತ್ನಿ ದೇವಿಶಾ ಅವರೊಂದಿಗೆ ಸದ್ಯ ಅವರು ಜರ್ಮನಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಫೋಟೋ ಸಮೇತ ಮಾಹಿತಿ ಖಚಿತಪಡಿಸಿದ್ದಾರೆ.
"ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನನ್ನ ಆರೋಗ್ಯದ ಬಗ್ಗೆ ಅವರ ಕಾಳಜಿ ವಹಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಶಸ್ತ್ರಚಿಕಿತ್ಸೆ ಮುಗಿದಿದೆ. ಶೀಘ್ರವೇ ಮೈದಾನಕ್ಕೆ ಹಿಂತಿರುಗುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಕಳೆದ ತಿಂಗಳು ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದ ವೇಳೆ 56 ಎಸೆತಗಳಲ್ಲಿ ಭರ್ಜರಿ ಶತಕ ಬಾರಿಸಿದ ನಂತರ ಫೀಲ್ಡಿಂಗ್ ಮಾಡುವಾಗ ಎಡ ಪಾದದ ಗಾಯಕ್ಕೆ ತುತ್ತಾಗಿ ಪಂದ್ಯದಿಂದ ಅರ್ಧದಲ್ಲೇ ಹೊರಬಿದ್ದಿದ್ದರು. ನಂತರ, ತಂಡದ ವೈದ್ಯರು ಕ್ರೀಡಾ ಹರ್ನಿಯಾ ಎಂದು ಗುರುತಿಸಿದ್ದರು. ಇಲ್ಲಿಯೇ ಚಿಕಿತ್ಸೆ ಪಡೆದುಕೊಂಡಿದ್ದ ಅವರು, ಕೆಲ ದಿನಗಳ ಹಿಂದೆ ಜರ್ಮನಿಗೆ ತೆರಳುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.