ದುಬೈ:ಐಸಿಸಿ ಟಿ20 ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕಾಗಿ ಪೈಪೋಟಿ ಹೆಚ್ಚಾಗಿದೆ. ಪಾಕಿಸ್ತಾನದ ಬ್ಯಾಟರ್‌ಗಳಾದ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಮ್ ಭಾರತದ ಸ್ಟಾರ್ ಟಿ20 ಪ್ಲೇಯರ್ ಸೂರ್ಯ ಕುಮಾರ್ ಯಾದವ್ ಅವರ ಸ್ಥಾನ ಕಬಳಿಸಲು ಹಣಾಹಣಿಗೆ ಬಿದ್ದಿದ್ದಾರೆ. ಇಂದು ನವೀಕರಿಸಲಾದ ಶ್ರೇಯಾಂಕ ಪಟ್ಟಿಯಲ್ಲಿ ಪಾಕ್ ಆಟಗಾರರು ಏರಿಕೆ ಕಂಡಿದ್ದಾರೆ.
ಪಾಕ್ ಆಟಗಾರರಿಗೆ ಸೂರ್ಯ ಕುಮಾರ್ ಯಾದವ್(SKY) ಸ್ಥಾನಕ್ಕೇರಲು ಅವಕಾಶವಿದೆ. ಇದಕ್ಕಾಗಿ ಇಬ್ಬರು ಆಟಗಾರರ ನಡುವೆಯೇ ಅಗ್ರಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ಇದೇ ತಿಂಗಳ 14 ರಿಂದ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಪಾಕಿಸ್ತಾನ 5 ಟಿ20 ಪಂದ್ಯಗಳ ಸರಣಿ ಆಡುತ್ತಿದೆ. ಇದು ಪಾಕ್ ಆಟಗಾರರ ಶ್ರೇಯಾಂಕಕ್ಕೆ ಸಹಕಾರಿಯಾಗಲಿದೆ.
ಸೂರ್ಯ ಕುಮಾರ್ ಯಾದವ್ ಪ್ರಸ್ತುತ 906 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಟಿ20 ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ರಿಜ್ವಾನ್ (811) ಮತ್ತು ಮೂರನೇ ಸ್ಥಾನದಲ್ಲಿ ಬಾಬರ್ (755) ಇದ್ದಾರೆ. ಭಾರತದಲ್ಲಿ ಐಪಿಎಲ್ ನಡೆಯುವ ಸಂದರ್ಭದಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ಪಂದ್ಯ ಆಡುತ್ತಿರುವುದರಿಂದ ರಿಜ್ವಾನ್ ಮತ್ತು ಬಾಬರ್ಗೆ ನೆರವಾಗುತ್ತಿದೆ.
ಇತ್ತೀಚೆಗೆ ಶ್ರೀಲಂಕಾ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿತ್ತು. ಸರಣಿಯಲ್ಲಿ ಕಿವೀಸ್ನ ಡೆವೊನ್ ಕಾನ್ವೆ ಅನುಪಸ್ಥಿತಿಯಿಂದಾಗಿ ಬಾಬರ್ ನವೀಕೃತ ಶ್ರೇಯಾಂಕದಲ್ಲಿ ಒಂದು ಸ್ಥಾನ ಏರಿಕೆ ಕಂಡಿದ್ದಾರೆ. ಕಾನ್ವೆ ಇಳಿಕೆಯಿಂದ ದಕ್ಷಿಣ ಆಫ್ರಿಕಾದ ಆ್ಯಡಂ ಮಾಕ್ರಮ್ ಕೂಡ ಒಂದು ಸ್ಥಾನದ ಏರಿಕೆ ಕಂಡಿದ್ದಾರೆ. ಕಾನ್ವೆ (745) ಮೂರರಿಂದ 5ನೇ ಸ್ಥಾನಕ್ಕೆ ಕುಸಿದಿದ್ದಾರೆ.