ಕೋಲ್ಕತ್ತಾ (ಪಶ್ಚಿಮ ಬಂಗಾಳ): ಏಕದಿನ ವಿಶ್ವಕಪ್ ಬೆನ್ನಲ್ಲೇ ನಡೆದ ಆಸ್ಟ್ರೇಲಿಯಾ ಸರಣಿ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಾಯಕತ್ವ ವಹಿಸಿಕೊಂಡು ಸರಣಿ ಗೆಲ್ಲಿಸಿದ್ದ ಸೂರ್ಯಕುಮಾರ್ ಯಾದವ್ ತವರಿನಲ್ಲಿ ನಡೆಯುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಪಂದ್ಯಗಳಿಗೆ ಅಲಭ್ಯರಾಗಿರಲಿದ್ದಾರೆ ಎಂದು ಹೇಳಲಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಗಾಯಕ್ಕೆ ತುತ್ತಾದ ಅವರು ಚೇತರಿಸಿಕೊಳ್ಳಲು ಸಮಯ ಬೇಕಾಗಿರುವುದರಿಂದ ಆಫ್ಘನ್ ಸರಣಿಯಿಂದ ಹೊರಗುಳಿಯಲಿದ್ದಾರೆ.
ಡಿಸೆಂಬರ್ 14 ರಂದು ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಫೀಲ್ಡಿಂಗ್ ಮಾಡುವಾಗ ಸೂರ್ಯಕುಮಾರ್ ಯಾದವ್ ಅವರು ಎಡ ಪಾದದ ಗಾಯಕ್ಕೆ ತುತ್ತಾಗಿದ್ದರು. ಆರಂಭದಲ್ಲಿ ಗಾಯ ಅಷ್ಟೊಂದು ಗಂಭೀರವಾಗಿರಲಿಲ್ಲ. ಮುಂಬೈಗೆ ಮರಳಿದ ನಂತರ ಸ್ಕ್ಯಾನ್ ಮತ್ತು ಎಂಆರ್ಐ ಮಾಡಿಸಿದ ಬಳಿಕವೇ ಗ್ರೇಡ್-II ಹಂತದ ಗಾಯಕ್ಕೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ.
"ಸೂರ್ಯ ಎಡ ಪಾದದ ಗ್ರೇಡ್-II ಹಂತದ ಗಾಯಕ್ಕೆ ಒಳಗಾಗಿದ್ದಾರೆ. ಜನವರಿ 11 ರಿಂದ ತವರಿನಲ್ಲಿ ಪ್ರಾರಂಭವಾಗುವ ಅಫ್ಘಾನಿಸ್ತಾನ ವಿರುದ್ಧದ ಮುಂದಿನ ಟಿ20 ಸರಣಿಯಲ್ಲಿ ಅವರು ಪಾಲ್ಗೊಳ್ಳುವುದು ಅನುಮಾನ. ಸ್ಕೈ ಈಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನರ್ವಸತಿ ಪ್ರಕ್ರಿಯೆಯಲ್ಲಿದ್ದಾರೆ. ಸೂರ್ಯ ತಂಡಕ್ಕೆ ಮರಳಲು 5-6 ವಾರಗಳು ತೆಗೆದುಕೊಳ್ಳಬಹುದು"ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.