ಹೈದರಾಬಾದ್: ಪ್ರಸ್ತುತ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅದ್ಭುತ ಫಾರ್ಮ್ನಲ್ಲಿ ಮುಂದುವೆರೆದಿದ್ದು, ದೇಶಿಯ ಹಾಗೂ ವಿದೇಶಿ ಪಿಚ್ಗಳಲ್ಲಿ ಅವರನ್ನು ಕಟ್ಟಿಹಾಕುವವರು ಯಾರೂ ಇಲ್ಲ ಎಂಬಂತಾಗಿದೆ. ಏಕದಿನ ವಿಶ್ವಕಪ್ನಲ್ಲಿ ಕೆಳಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ, ನಂತರ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಮಿಂಚಿದ್ದಾರೆ.
ವಿಶ್ವಕಪ್ ಮುಗಿದ ನಾಲ್ಕು ದಿನಗಳ ಅಂತರದಲ್ಲಿ ಆರಂಭವಾದ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ಅವರಿಗೆ ನಾಯಕತ್ವ ನೀಡಲಾಗಿತ್ತು. ನಾಯಕರಾಗಿ ಸರಣಿ ಗೆಲ್ಲಿಸಿದ್ದಲ್ಲದೇ, ವೈಯಕ್ತಿಕವಾಗಿಯೂ ಉತ್ತಮ ಪ್ರದರ್ಶನ ನೀಡಿದ್ದರು. ಮೊದಲ ಟಿ20ಯಲ್ಲೇ ಅಬ್ಬರಿಸಿದ ಅವರು, 42 ಬಾಲ್ನಲ್ಲಿ 9 ಬೌಂಡರಿ, 4 ಸಿಕ್ಸ್ನಿಂದ 80 ರನ್ ಕಲೆಹಾಕಿದ್ದರು.
ಅಲ್ಲದೇ ದಕ್ಷಿಣ ಆಫ್ರಿಕಾದ ವಿರುದ್ಧ ನಡೆಯುತ್ತಿರುವ ಟಿ20ಯ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಕೇವಲ 36 ಎಸೆತಗಳಲ್ಲಿ 56 ರನ್ ಗಳಿಸಿದರು. ಆಸ್ಟ್ರೇಲಿಯಾ ವಿರುದ್ಧ ಒಂದೇ ಪಂದ್ಯದಲ್ಲಿ ಪರಿಣಾಮಕಾರಿ ಇನ್ನಿಂಗ್ಸ್ ಆಡಿದ್ದರು, ಹರಿಣಗಳ ವಿರುದ್ಧ ಘರ್ಜಿಸಿರುವುದು ಸೂರ್ಯ ರೇಟಿಂಗ್ ಏರಿಕೆಗೆ ಕಾರಣವಾಗಿದೆ.
ಸೂರ್ಯ ಒಟ್ಟು 865 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ. ಎರಡನೇ ಸ್ಥಾನದಲ್ಲಿರುವ ಪಾಕಿಸ್ತಾನದ ಆಟಗಾರ ಮೊಹಮ್ಮದ್ ರಿಜ್ವಾನ್ ಅವರಿಂದ 78 ಅಂಕಗಳ ಮುಂದಿದ್ದಾರೆ. ರಿಜ್ವಾನ್ 787 ರೇಟಿಂಗ್ ಪಾಯಿಂಟ್ ಹೊಂದಿ ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಾಮ್ (758) ಮೂರನೇ ಸ್ಥಾನದಲ್ಲಿದ್ದಾರೆ. ಸೂರ್ಯ ಅವರ ರೇಟಿಂಗ್ ಅಂತರ ನೋಡಿದರೆ, ಟಿ20 ವಿಶ್ವಕಪ್ ವರೆಗೆ ನಂ.1 ಸ್ಥಾನದಲ್ಲೇ ಮುಂದುವರೆಯುವ ಸಾಧ್ಯತೆ ಇದೆ.
ರಿಂಕು- ತಿಲಕ್ ಶ್ರೇಯಾಂಕ ಏರಿಕೆ: ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ವಿರುದ್ಧ ಮಿಂಚುತ್ತಿರುವ ಭಾರತದ ಯುವ ಫ್ಯೂಚರ್ ಸ್ಟಾರ್ಗಳಾದ ರಿಂಕು ಸಿಂಗ್ ಮತ್ತು ತಿಲಕ್ ವರ್ಮಾ ಶ್ರೇಯಾಂಕದ ಏರಿಕೆ ಆಗಿದೆ. ತಿಲಕ್ ವರ್ಮಾ 10 ಸ್ಥಾನಗಳ ಏರಿಕೆಯಿಂದ 55ನೇ ರ್‍ಯಾಂಕಿಂಗ್ ಪಡೆದರೆ, ರಿಂಕು ಸಿಂಗ್ 46 ಸ್ಥಾನ ಏರಿಕೆ ಕಂಡು 59ನೇ ಶ್ರೇಯಾಂಕದಲ್ಲಿದ್ದಾರೆ.
ಬೌಲಿಂಗ್ ಶ್ರೇಯಾಂಕ: ಆಸ್ಟ್ರೇಲಿಯಾ ವಿರುದ್ಧ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದು ಐಸಿಸಿ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದುಕೊಂಡಿದ್ದ ರವಿ ಬಿಷ್ಣೋಯ್ ಅವರನ್ನು ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಸರಿಗಟ್ಟಿದ್ದಾರೆ. ರವಿ ಮತ್ತು ರಶೀದ್ 692 ರೇಟಿಂಗ್ ಪಾಯಿಂಟ್ನಿಂದು ಅಗ್ರಸ್ಥಾನವನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಸ್ಪಿನ್ನರ್ ತಬ್ರೈಜ್ ಶಮ್ಸಿ ಭಾರತದ ವಿರುದ್ಧ ಗಮನಾರ್ಹ ಪ್ರದರ್ಶನ ನೀಡಿದ್ದು 10ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಅರ್ಜುನ ಪ್ರಶಸ್ತಿಗೆ ವಿಶ್ವಕಪ್ ಸ್ಟಾರ್ ಮೊಹಮ್ಮದ್ ಶಮಿ ಹೆಸರು ಸೂಚಿಸಿದ ಬಿಸಿಸಿಐ