ಮುಂಬೈ (ಮಹಾರಾಷ್ಟ್ರ):ಶ್ರೀಲಂಕಾ ವಿರುದ್ಧ ಟಿ20 ಕ್ರಿಕೆಟ್ ಸರಣಿಗೆ ಟೀಂ ಇಂಡಿಯಾದ ಉಪ ನಾಯಕನಾಗಿ ಆಯ್ಕೆಯಾಗಿರುವ ಸೂರ್ಯಕುಮಾರ್ ಯಾದವ್, ಕ್ರಿಕೆಟ್‌ನಲ್ಲಿ ತಮ್ಮ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಈ ಬಗ್ಗೆ ಮೊದಲ ಬಾರಿಗೆ ಪ್ರಕ್ರಿಯಿಸಿರುವ ಪ್ರತಿಭಾನ್ವಿತ ಬ್ಯಾಟರ್, ಭಾರತೀಯ ತಂಡದ ಉಪನಾಯಕನಾಗಿ ಆಯ್ಕೆ ಆಗುತ್ತೇನೆ ಎಂದು ಯಾವತ್ತೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಮೂಡಿಸಿರುವ 'ಸ್ಕೈ' ಖ್ಯಾತಿಯ ಸೂರ್ಯಕುಮಾರ್ ಯಾದವ್, ಜನವರಿ 3ರಿಂದ ಆರಂಭವಾಗಲಿರುವ ಭಾರತ ಮತ್ತು ಶ್ರೀಲಂಕಾ ನಡುವೆ 3 ಪಂದ್ಯಗಳ ಟಿ20 ಸರಣಿಗೆ ಉಪನಾಯಕನಾಗಿ ನೇಮಕವಾಗಿದ್ದಾರೆ. ಈ ಸರಣಿಯಲ್ಲಿ ಟೀಂ ಇಂಡಿಯಾವನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕರಾಗಿ ಮುನ್ನಡೆಸುವರು.
ಇದನ್ನೂ ಓದಿ:ಸೂರ್ಯಕುಮಾರ್‌ರನ್ನು ಬಿಗ್ ಬ್ಯಾಷ್‌ಗೆ ಕರೆತರುವಷ್ಟು ಹಣ ನಮ್ಮಲ್ಲಿಲ್ಲ: ಮ್ಯಾಕ್ಸ್‌ವೆಲ್
ಸೌರಾಷ್ಟ್ರ-ಮುಂಬೈ ನಡುವಿನ ರಣಜಿ ಟ್ರೋಫಿ ಪಂದ್ಯದ ಎರಡನೇ ದಿನದಾಟದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೂರ್ಯಕುಮಾರ್, ನಾನು ಇದನ್ನು (ಉಪನಾಯಕ ಸ್ಥಾನ) ನಿರೀಕ್ಷಿಸಿರಲಿಲ್ಲ. ಆದರೆ, ಹೊಸ ಜವಾಬ್ದಾರಿಯನ್ನು ಹೆಚ್ಚುವರಿ ಹೊರೆಯಾಗಿಯೂ ತೆಗೆದುಕೊಳ್ಳುವುದಿಲ್ಲ. ತನ್ನ ಸಹಜ ಆಟವನ್ನು ಮುಂದುವರಿಸುತ್ತೇನೆ ಎಂದರು.
ಬ್ಯಾಟಿಂಗ್ನಲ್ಲಿ ತೋರಿದ ಉತ್ತಮ ಪ್ರದರ್ಶನಕ್ಕೆ ಪ್ರತಿಫಲ:ಈ ವರ್ಷ ನಾನು ಬ್ಯಾಟಿಂಗ್ನಲ್ಲಿ ತೋರಿದ ಉತ್ತಮ ಪ್ರದರ್ಶನಕ್ಕೆ ಪ್ರತಿಫಲದ ರೀತಿಯಲ್ಲಿ ಉಪನಾಯಕತ್ವ ಸಿಕ್ಕಿದೆ ಎಂದು ನಾನು ಹೇಳಬಲ್ಲೆ. ಇದು ನಿಜವಾಗಿಯೂ ಒಳ್ಳೆಯದು ಮತ್ತು ಈ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಎದುರು ನೋಡುತ್ತಿದ್ದೇನೆ ಎಂದೂ 'ಮಿಸ್ಟರ್ 360' ಖ್ಯಾತಿಯ ಆಟಗಾರ ಹೇಳಿದ್ದಾರೆ.