ಬೆಂಗಳೂರು: ಟಿ20ಯನ್ನು ಬ್ಯಾಟರ್ಗಳ ಗೇಮ್ ಎಂದು ಕರೆಯುತ್ತಾರೆ. ಆದರೆ ನಾನು ಟಿ20ಯಲ್ಲಿ ಸರಣಿ ಗೆಲ್ಲಿಸುವ ಸಾಮರ್ಥ್ಯ ಹೊಂದಿರುವವರು ಬೌಲರ್ಗಳು ಎನ್ನುತ್ತೇನೆ. ಬ್ಯಾಟರ್ ಒಂದು ಪಂದ್ಯವನ್ನು ಗೆಲ್ಲಿಸಬಲ್ಲ ಅಷ್ಟೇ. ಆದರೆ ಬೌಲರ್ ಸರಣಿ ಶ್ರೇಷ್ಠ ಆಗುತ್ತಾನೆ ಎಂದು ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೆಯ ಪಂದ್ಯವನ್ನು ಗೆದ್ದ ನಂತರ ಬಿಸಿಸಿಐ ಟಿವಿಯಲ್ಲಿ ಮಾತನಾಡಿದ ಅವರು, "ತಂಡ ಗೆದ್ದಾಗ ಸಂಭ್ರಮಿಸುತ್ತೇವೆ, ಆದರೆ ಗೆಲುವಿನ ಒಳಗೂ ಕೆಲವು ಲೋಪಗಳಿರುತ್ತವೆ. ಅವನ್ನು ಗಮನಿಸಿ ಮುಂದಿನ ಪಂದ್ಯಕ್ಕೆ ತಿದ್ದಿಕೊಳ್ಳುವ ಅಗತ್ಯ ಇದೆ" ಎಂದಿದ್ದಾರೆ.
ಜೀವನಕ್ಕೆ ಹೊಸ ಆಯಾಮ:"ಸರಣಿ ಗೆದ್ದಿರುವುದು ಸಂತಸ ತಂದಿದೆ. ಇದರಿಂದ ನನಗೆ ಹೊಸ ಪಟ್ಟ ಸಿಕ್ಕಿರುವುದು ಸಹ ಸಂತೋಷಕ್ಕೆ ಕಾರಣವಾಗಿದೆ. ನಾಯಕತ್ವದಿಂದ ಜೀವನದಲ್ಲಿ ಹೊಸ ಆಯಾಮ ಸಿಕ್ಕಿದಂತಾಗಿದೆ" ಎಂದು ಸೂರ್ಯ ನಗುತ್ತಾ ಹೇಳಿದ್ದಾರೆ.
"ಅರ್ಶದೀಪ್ ಸಿಂಗ್ ಅವರು ಲೀಗ್ ಕ್ರಿಕೆಟ್ನಲ್ಲಿ ಕಡೆಯ ಓವರ್ಗಳನ್ನು ಮಾಡಿರುವುದನ್ನು ಗಮನಿಸಿದ್ದೆ, ಅದಕ್ಕಾಗಿಯೇ ಅವರಿಗೆ ಕೊನೆಯ ಓವರ್ ಮೀಸಲಿಟ್ಟಿದ್ದೆ. ಕೊನೆಯ ಓವರ್ನಲ್ಲಿ ಕಡಿಮೆ ರನ್ಗಳು ಇದ್ದರೆ ಬೌಲಿಂಗ್ ಮಾಡಬೇಕಾಗಬಹುದು ಎಂದು ಮೊದಲೇ ಹೇಳಿದ್ದೆ. ಕೇವಲ 3 ರನ್ ಕೊಟ್ಟು ಅರ್ಶದೀಪ್ ಜಯಕ್ಕೆ ಕಾರಣರಾದರು. ಸ್ಪಿನ್ನರ್ಗಳಾದ ಅಕ್ಷರ್ ಮತ್ತು ರವಿ ಉತ್ತಮ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಕ್ಷರ್ ಪಟೇಲ್ ಮೊದಲೆರಡು ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ರವಿ ಮೊದಲ ಪಂದ್ಯದಲ್ಲಿ ದುಬಾರಿ ಆದರೂ ನಂತರ ಕಮ್ಬ್ಯಾಕ್ ಮಾಡಿದರು".
"ಟಿ20ಯನ್ನು ಬ್ಯಾಟರ್ಗಳ ಆಟ ಎಂದು ಕರೆಯುತ್ತಾರೆ, ಆದರೆ ಬ್ಯಾಟರ್ಗಳಿಗೆ ಒಂದು ಪಂದ್ಯವನ್ನು ಗೆಲ್ಲಿಸಲು ಮಾತ್ರ ಸಾಧ್ಯವಾಗುತ್ತದೆ. ಬೌಲರ್ಗಳು ಸರಣಿಯನ್ನು ಗೆಲ್ಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದು ರವಿ ಬಿಷ್ಣೋಯ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿರುವುದನ್ನು ಉಲ್ಲೇಖಿಸಿ ಹೇಳಿದರು.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಭಾರತ 6 ರನ್ಗಳಿಂದ ರೋಚಕ ಜಯ ಸಾಧಿಸಿತ್ತು. ಈ ಮೂಲಕ ಸರಣಿಯನ್ನು 4-1 ರಿಂದ ವಶಪಡಿಸಿಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ಬಲದಿಂದ 161 ರನ್ಗಳ ಗುರಿ ನೀಡಿತ್ತು. ಇದನ್ನು ಬೆನ್ನತ್ತಿದ ಆಸೀಸ್ ತಂಡದಲ್ಲಿ ಬೆನ್ ಮೆಕ್‌ಡರ್ಮಾಟ್ (54) ಅರ್ಧಶತಕ ಗಳಿಸಿದರೂ 20 ಓವರ್ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ ಭಾರತ ಪಂದ್ಯವನ್ನು 6 ರನ್ಗಳಿಂದ ಜಯಿಸಿತು.
ಇದನ್ನೂ ಓದಿ:ಆಸೀಸ್ ಸರಣಿಯಲ್ಲಿ ಟಿ20 ವಿಶ್ವಕಪ್ ಕದತಟ್ಟಿದ ಮೂವರು ಆಟಗಾರರಿವರು