ಮುಂಬೈ: ಭಾರತ ತಂಡದ ಉದಯೋನ್ಮುಖ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ತಮ್ಮ ನೆಚ್ಚಿನ ಸಾರ್ವಕಾಲಿಕ ಐಪಿಎಲ್ ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಸಿಎಸ್ಕೆ ನಾಯಕ ಎಂಎಸ್ ಧೋನಿ ಮತ್ತು ಹೈದರಾಬಾದ್ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಅವರನ್ನು ತಮ್ಮ 11 ಆಟಗಾರರ ಪಟ್ಟಿಯಲ್ಲಿ ಆಯ್ಕೆ ಮಾಡದಿರುವುದಕ್ಕೆ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಕಳೆದ ಎರಡು ಆವೃತ್ತಿಗಳಲ್ಲಿ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಆದರೆ, ಪ್ರತಿ ಆವೃತ್ತಿಯ ಗೆಲುವಿನ ಸರಾಸರಿಯಲ್ಲಿ ಹಿಂದೆ ಬಿದ್ದಿದೆ. ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಸರಾಸರಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇದಕ್ಕೆಲ್ಲಾ ಕಾರಣವೆಂದರೆ ಎಂಎಸ್ ಧೋನಿ ನಾಯಕತ್ವ.
ಧೋನಿ ಕೇವಲ ಶ್ರೇಷ್ಠ ನಾಯಕನಲ್ಲದೆ, ಅತ್ಯುತ್ತಮ ಫಿನಿಶರ್ ಕೂಡ ಆಗಿದ್ದಾರೆ. ಆದರೆ, ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ತಮ್ಮ ನೆಚ್ಚಿನ ಸಾರ್ವಕಾಲಿಕ ಐಪಿಎಲ್ ತಂಡದಲ್ಲಿ ಧೋನಿಗೆ ಅವಕಾಶ ನೀಡದಿರುವುದು ಆಶ್ಚರ್ಯ ಮೂಡಿಸಿದೆ.
ಕ್ರಿಕ್ಬಜ್ನಲ್ಲಿ ಹರ್ಷ ಬೋಗ್ಲೆ ಅವರೊಡನೆ ನಡೆದ ಸಂಭಾಷಣೆಯ ವೇಳೆ ಸೂರ್ಯಕುಮಾರ್ ಯಾದವ್ ತಮ್ಮ ನೆಚ್ಚಿನ ಐಪಿಎಲ್ ಇಲೆವೆನ್ ಆಯ್ಕೆ ಮಾಡಿದ್ದಾರೆ. ತಮ್ಮನ್ನು ಮತ್ತು ಮುಂಬೈ ಇಂಡಿಯನ್ಸ್ನ ನಾಲ್ಕು ಆಟಗಾರರನ್ನು ಒಳಗೊಂಡಿರಬೇಕೆಂಬ ಷರತ್ತಿನ ಮೇಲೆ ಈ ತಂಡವನ್ನು ಸೂರ್ಯ ಆಯ್ಕೆ ಮಾಡಿದ್ದಾರೆ.