ರಾಜ್‌ಕೋಟ್ (ಗುಜರಾತ್):ಕಡಿಮೆ ಎಸೆತಗಳಲ್ಲಿ 1500 ರನ್ ಮಾಡಿದ ವಿಶ್ವದ ಮೊದಲಿಗ, ವರ್ಷದ ಮೊದಲ ಶತಕ ಬಾರಿಸಿದ ಭಾರತೀಯ, ಮೂರನೇ ಶತಕ ಗಳಿಸಿದ 2ನೇ ಆಟಗಾರ..! ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಸಿಡಿಲಬ್ಬರದ ಅಜೇಯ ಶತಕದ ಬಳಿಕ ಹಲವು ದಾಖಲೆಗಳು ಸೃಷ್ಟಿಯಾಗಿವೆ.
ಟಿ20 ಕ್ರಿಕೆಟ್ ಅಧಿಪತಿಯಾಗಿರುವ ಸೂರ್ಯಕುಮಾರ್ ಯಾದವ್ ಕೇವಲ 843 ಎಸೆತಗಳಲ್ಲಿ 1500 ರನ್ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ದಾಖಲೆಯನ್ನು ಬರೆದರು. ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ಮಾಜಿ ನಾಯಕ ಆ್ಯರೋನ್ ಫಿಂಚ್, ಪಾಕಿಸ್ತಾನದ ನಾಯಕ ಬಾಬರ್ ಅಜಂ, ಇನ್ನೊಬ್ಬ ಬ್ಯಾಟರ್ ಮೊಹಮದ್ ರಿಜ್ವಾನ್ರ ಬಳಿಕ ಅತಿ ಕಡಿಮೆ ಇನಿಂಗ್ಸ್ನಲ್ಲಿ 1500 ರನ್ ಗಳಿಸಿದ ದಾಖಲೆಗೆ ಪಾತ್ರರಾದರು.
ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಆ್ಯರೋನ್ ಫಿಂಚ್ ಬಾಬರ್ ಅಜಂ 39 ಇನಿಂಗ್ಸ್ನಲ್ಲಿ ಈ ದಾಖಲೆ ಮಾಡಿದ್ದಾರೆ. ಮೊಹಮದ್ ರಿಜ್ವಾನ್ ಇಷ್ಟೇ ರನ್ಗಾಗಿ 42 ಇನಿಂಗ್ಸ್ ತೆಗೆದುಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ 43 ಇನಿಂಗ್ಸ್ಗಳಲ್ಲಿ 1500 ರನ್ ಶಿಖರ ದಾಟಿದ್ದಾರೆ. ಇಷ್ಟು ಇನಿಂಗ್ಸ್ನಲ್ಲಿ 150 ಕ್ಕಿಂತಲೂ ಅಧಿಕ ಸ್ಟ್ರೈಕ್ರೇಟ್ ಹೊಂದಿರುವ ಮೊದಲಿಗ ಆಟಗಾರನಾಗಿದ್ದಾನೆ.
ಸೂರ್ಯ 45 ಪಂದ್ಯಗಳ 43 ಇನ್ನಿಂಗ್ಸ್‌ಗಳಲ್ಲಿ 46.41 ಸರಾಸರಿಯಲ್ಲಿ 1,578 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕಗಳು ಮತ್ತು 13 ಅರ್ಧ ಶತಕಗಳನ್ನು ಬಾರಿಸಿದ್ದಾರೆ. 117 ಗರಿಷ್ಠ ಸ್ಕೋರ್ ಆಗಿದ್ದರೆ, 180.34 ಸ್ಟ್ರೈಕ್ರೇಟ್ ಹೊಂದಿದ್ದಾರೆ. ಇನ್ನು ಟಿ20ಯಲ್ಲಿ ಎರಡನೇ ವೇಗದ ಶತಕವನ್ನು ಬಾರಿಸಿದ ಭಾರತೀಯ ಬ್ಯಾಟರ್ ಆಗಿದ್ದಾರೆ. ನಿನ್ನೆಯ ಪಂದ್ಯದಲ್ಲಿ 45 ಎಸೆತಗಳಲ್ಲಿ ಶತಕ ಸಾಧನೆ ಮಾಡಿದ್ದರು.