ಅಹ್ಮದಾಬಾದ್: ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ 2ನೇ ಏಕದಿನ ಪಂದ್ಯದಲ್ಲಿ ವಿಂಡೀಸ್ ವಿರುದ್ಧ 44 ರನ್ಗಳಿಂದ ಗೆಲ್ಲುವ ಮೂಲಕ ಒಂದು ಪಂದ್ಯ ಉಳಿದಿರುವಂತೆ 2-0ಯಲ್ಲಿ ಸರಣಿ ಜಯಿಸಿದೆ. ರೋಹಿತ್ ಶರ್ಮಾ ಅಧಿಕೃತ ನಾಯಕನಾಗಿ ಗೆದ್ದ ಮೊದಲ ಏಕದಿನ ಸರಣಿ ಇದಾಗಿದೆ.
ಸೂರ್ಯಕುಮಾರ್ ಯಾದವ್(64) ಅರ್ಧಶತಕ ಮತ್ತು ಕೆಎಲ್ ರಾಹುಲ್ ಅವರ 49 ರನ್ಗಳ ನೆರವಿನಿಂದ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 9 ವಿಕೆಟ್ ಕಳೆದುಕೊಂಡು 237 ರನ್ಗಳಿಸಿತ್ತು.
238 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಅನಾನುಭವಿ ವಿಂಡೀಸ್ ತಂಡ 46 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 193ರನ್ಗಳಿಗೆ ಆಲೌಟ್ ಆಗಿ ಸರಣಿ ಕೈಚೆಲ್ಲಿದೆ. ವೆಸ್ಟ್ ಇಂಡೀಸ್ ಮೊದಲ ವಿಕೆಟ್ಗೆ 30 ರನ್ಗಳ ಜೊತೆಯಾಟ ನೀಡಿದರೂ ನಂತರ ದಿಢೀರ್ ಕುಸಿತಕ್ಕೆ ಒಳಗಾಯಿತು. 32ಕ್ಕೆ ಒಂದು ವಿಕೆಟ್ ಕಳೆದುಕೊಂಡಿದ್ದ ಕೆರಿಬಿಯನ್ನರು 76 ರನ್ಗಳಾಗುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು.
ಕನ್ನಡಿಗ ಪ್ರಸಿಧ್, ಬ್ರೆಂಡನ್ ಕಿಂಗ್(18), ಡರೇನ್ ಬ್ರಾವೋ(1) ನಿಕೋಲಸ್ ಪೂರನ್(9) ವಿಕೆಟ್ ಪಡೆದರು. 27 ರನ್ಗಳಿಸಿದ್ದ ಹೋಪ್ರನ್ನು ಚಹಲ್ ಕಳೆದ ಪಂದ್ಯದ ಅರ್ಧಶತಕ ವೀರ ಜೇಸನ್ ಹೋಲ್ಡರ್ರನ್ನು ಶಾರ್ದೂಲ್ ಠಾಕೂರ್ ಪೆವಿಲಿಯನ್ಗಟ್ಟಿದರು.
ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸುತ್ತಿದ್ದ ವಿಂಡೀಸ್ಗೆ ಅಕೀಲ್ ಹೊಸೇನ್(34), ಅಲೆನ್(11) ಒಡಿಯನ್ ಸ್ಮಿತ್(24) ಸ್ವಲ್ಪ ಹೊತ್ತು ಭಾರತದ ಗೆಲುವಿಗೆ ಅಡ್ಡಿಯಾದರು. ಆದರೆ, ಠಾಕೂರ್ ಹೊಸೇನ್ ವಿಕೆಟ್ ಪಡೆದು ಬ್ರೇಕ್ ನೀಡಿದರೆ, ಅಪಾಯಕಾರಿ ಸ್ಮಿತ್ ವಿಕೆಟ್ ಪಡೆದು ಸುಂದರ್ ಭಾರತಕ್ಕೆ ಗೆಲುವು ಖಚಿಪಡಿಸಿದರು.