ಮುಂಬೈ:2020ರ ಅಂಡರ್ 19 ಕ್ರಿಕೆಟ್ ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಬಳಿಕವೂ ಕಾರ್ತಿಕ್ ತ್ಯಾಗಿ ಕ್ರಿಕೆಟ್ ಬೆಳವಣಿಗೆ ಉತ್ತಮವಾಗಿ ಮುಂದುವರಿಯುತ್ತಿದೆ. ಅಂಡರ್ 19 ವಿಶ್ವಕಪ್ನಲ್ಲಿ ನೀಡಿದ ಪ್ರದರ್ಶನ ಅವರಿಗೆ ಐಪಿಎಲ್ನಲ್ಲಿ ಅವಕಾಶ ತಂದುಕೊಟ್ಟಿದೆ.
ರಾಜಸ್ಥಾನ್ ರಾಯಲ್ಸ್ ಹರಾಜಿನಲ್ಲಿ ಖರೀದಿಸಿದ್ದಲ್ಲದೆ, ಯುವ ಆಟಗಾರನಿಗೆ ಸಾಕಷ್ಟು ಪಂದ್ಯಗಳಲ್ಲಿ ಅವಕಾಶವನ್ನು ನೀಡಿತು. ಅದಕ್ಕೆ ತಕ್ಕಂತೆ ತ್ಯಾಗಿ 9 ವಿಕೆಟ್ ಪಡೆದು ಮಿಂಚಿದರು. 2022ರ ಮೆಗಾ ಹರಾಜಿನಲ್ಲಿ ಅವರನ್ನು ಸನ್ರೈಸರ್ಸ್ ಹೈದರಾಬಾದ್ 4 ಕೋಟಿ ರೂ. ನೀಡಿ ಖರೀದಿಸಿತು. ಉತ್ತರ ಪ್ರದೇಶದ ವೇಗಿ ತಮ್ಮ ಈ ಯಶಸ್ಸಿನ ಕ್ರೆಡಿಟ್ ಅನ್ನು ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾಗೆ ಅರ್ಪಿಸಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿರುವ ಕಾರ್ತಿಕ್, ನಾನು ಯಾವಾಗಲೂ ಒಂದು ವಿಷಯವನ್ನು ಹೇಳುತ್ತಿರುತ್ತೇನೆ. ಅಂಡರ್ 16 ನಂತರ ಸುರೇಶ್ ರೈನಾ ದೇವರಂತೆ ನನ್ನ ಜೀವನವನ್ನು ಪ್ರವೇಶಿಸಿದರು. ಅವರೇ ನನ್ನ ಪ್ರತಿಭೆಯನ್ನು ಗುರುತಿಸಿದರು. ನಾನು ರಣಜಿ ತಂಡಕ್ಕೆ ಆಯ್ಕೆಯಾದ ಮೇಲೆ ಜನರು ನನ್ನನ್ನು ಗುರುತು ಹಿಡಿಯಲು ಶುರುಮಾಡಿದರು ಎಂದು ಹೇಳಿದ್ದಾರೆ.
ನಾನು ರಣಜಿ ಕ್ಯಾಂಪ್ಗೆ ಬಂದಾಗ ಕೇವಲ 16 ವರ್ಷದ ಯುವಕ. ಅಲ್ಲಿ ಸಾಕಷ್ಟು ನುರಿತ ಆಟಗಾರರಿದ್ದರು. ಅಲ್ಲಿಗೆ ಒಂದು ದಿನ ಸುರೇಶ್ ರೈನಾ ಕೂಡ ಆಗಮಿಸಿದ್ದರು. ನಾನು ಸುಮ್ಮನೆ ಕುಳಿತು ಪ್ರತಿಯೊಂದನ್ನೂ ಗಮನಿಸುತ್ತಿದ್ದೆ. ಅವರು ಅಭ್ಯಾಸ ಆದ ನಂತರ ವಾಪಸ್ ತೆರಳಿದರು, ಆದರೆ ಏನೋ ಗೊತ್ತಿಲ್ಲ, ವಾಪಸ್ ಬಂದೂ ತಂಡದಲ್ಲಿ ನಿನ್ನ ಪಾತ್ರವೇನು? ಎಂದು ಕೇಳಿದರು. ನಾನು ಬೌಲರ್ ಎಂದೆ. ನಂತರ ಅವರಿಗೆ ನೆಟ್ಸ್ನಲ್ಲಿ ಬೌಲಿಂಗ್ ಮಾಡುವ ಅವಕಾಶ ನೀಡಿದರು. ನನ್ನ ಪ್ರದರ್ಶನವನ್ನು ನೋಡಿದ ಅವರು, "ಭವಿಷ್ಯದಲ್ಲಿ ಸಾಕಷ್ಟು ಅವಕಾಶಗಳು ಸಿಗುತ್ತವೆ ಎಂದು ನಾನು ನಿನಗೆ ಭರವಸೆ ನೀಡುತ್ತೇನೆ" ಎಂದರು.
ಇದು ನನಗೆ ವೈಯಕ್ತಿಕವಾಗಿ ಒಳ್ಳೆಯ ವಿಷಯವಾಗಿತ್ತು. ಸುರೇಶ್ ರೈನಾ ಅಂತಹ ದೊಡ್ಡ ಆಟಗಾರ ನನ್ನ ಪ್ರದರ್ಶನವನ್ನು ಗುರುತಿಸಿದ್ದರು. ನನಗೆ ನಿಜಕ್ಕೂ ಆಶ್ಚರ್ಯವಾಗಿತ್ತು. ಆ ನಂತರ ಉತ್ತರ ಪ್ರದೇಶ ರಣಜಿ ತಂಡದಲ್ಲಿ ನನ್ನ ಹೆಸರು ಸೇರ್ಪಡೆಗೊಂಡಿತ್ತು. ಇದು ನನಗೆ ಸ್ವಲ್ಪ ಆಘಾತವನ್ನುಂಟು ಮಾಡಿತ್ತು. ರಣಜಿ ತಂಡದಲ್ಲಿ ನನ್ನ ಕರಿಯರ್ ಆರಂಭವಾಗಿ ಅಂಡರ್ 19 ತಂಡದಲ್ಲಿ ಸಾಧಿಸಿದೆ ಮತ್ತು ಅಂಡರ್ 19 ವಿಶ್ವಕಪ್ನಲ್ಲೂ ಆಡಿದೆ ಎಂದು ತಮ್ಮ ಕ್ರಿಕೆಟ್ ಜೀವನದ ಬಗ್ಗೆ 21 ವರ್ಷದ ಆಟಗಾರ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಕೋವಿಡ್ ಭೀತಿಯಲ್ಲೂ ಗೆದ್ದು ಬೀಗಿದ ಡೆಲ್ಲಿ: 'ಪಾಂಟಿಂಗ್ ಮಾತುಗಳು ಆತ್ಮವಿಶ್ವಾಸ ತುಂಬಿದವು'- ಅಕ್ಷರ್