ಕರ್ನಾಟಕ

karnataka

ETV Bharat / sports

ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ 'ಮಿಸ್ಟರ್​ ಐಪಿಎಲ್' ಸುರೇಶ್ ರೈನಾ - Ex India Cricketer Suresh Raina

ಟೀಂ ಇಂಡಿಯಾ ಪರ ಕಣಕ್ಕಿಳಿದು ಅನೇಕ ದಾಖಲೆಗಳನ್ನು ಸೃಷ್ಟಿಸಿರುವ ಮಧ್ಯಮ ಕ್ರಮಾಂಕದ ಬ್ಯಾಟರ್​ ಸುರೇಶ್ ರೈನಾ ಎಲ್ಲ ಮಾದರಿಯ ಕ್ರಿಕೆಟ್​ನಿಂದ ಇಂದು ನಿವೃತ್ತಿ ಪಡೆದುಕೊಂಡಿದ್ದಾರೆ.

Suresh Raina announces retirement
Suresh Raina announces retirement

By

Published : Sep 6, 2022, 1:19 PM IST

ಟೀಂ ಇಂಡಿಯಾ ಮಾಜಿ ಆಟಗಾರ, ಎಡಗೈ ಸ್ಫೋಟಕ ಬ್ಯಾಟರ್ ಸುರೇಶ್‌ ರೈನಾ ಎಲ್ಲ ಮಾದರಿ ಕ್ರಿಕೆಟ್​​ನಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್​​ ಮೂಲಕ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

"ನನ್ನ ದೇಶ ಮತ್ತು ಉತ್ತರ ಪ್ರದೇಶ ರಾಜ್ಯ ಪ್ರತಿನಿಧಿಸುವುದು ನನಗೆ ಸಿಕ್ಕ ದೊಡ್ಡ ಗೌರವ. ಇದೀಗ ಕ್ರಿಕೆಟ್​​ನ ಎಲ್ಲ ಮಾದರಿಯಿಂದಲೂ ನಿವೃತ್ತಿ ಘೋಷಣೆ ಮಾಡುತ್ತಿದ್ದೇನೆ. ಬಿಸಿಸಿಐ, ಉತ್ತರ ಪ್ರದೇಶ ಕ್ರಿಕೆಟ್​ ಬೋರ್ಡ್​​, ಚೆನ್ನೈ ಸೂಪರ್​​ ಕಿಂಗ್ಸ್ ಹಾಗೂ ಐಪಿಎಲ್​​​ಗೆ ಧನ್ಯವಾದಗಳು. ನನ್ನೆಲ್ಲಾ ಅಭಿಮಾನಿಗಳು ಹಾಗೂ ಅವರ ಬೆಂಬಲಕ್ಕಾಗಿ ಧನ್ಯವಾದಗಳು. ನನ್ನ ಸಾಮರ್ಥ್ಯದ ಮೇಲೆ ಅಚಲ ನಂಬಿಕೆ ಇಟ್ಟಿದ್ದಕ್ಕಾಗಿ ನಾನು ಆಭಾರಿ" ಎಂದಿದ್ದಾರೆ.

2020ರ ಆಗಸ್ಟ್​ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ವಿದಾಯ ಪಡೆದುಕೊಂಡಿದ್ದ ಸುರೇಶ್ ರೈನಾ, ಐಪಿಎಲ್​​ನಲ್ಲಿ ಮಾತ್ರ ಭಾಗಿಯಾಗುತ್ತಿದ್ದರು. ಆದರೆ, ಇದೀಗ ಎಲ್ಲ ಮಾದರಿ ಕ್ರಿಕೆಟ್​ನಿಂದ ದೂರ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ:ಧೋನಿ ಭಾಯ್‌ ಮುಂದಿನ ವರ್ಷದ IPL ಆಡದಿದ್ದರೆ, ನಾನೂ ಆಡಲ್ಲ: ಸುರೇಶ್​​ ರೈನಾ

ಮಿಸ್ಟರ್​ ಐಪಿಎಲ್​ ಎಂದು ಖ್ಯಾತಿ ಗಿಟ್ಟಿಸಿಕೊಂಡಿದ್ದ ಟೀಂ ಇಂಡಿಯಾ ಮಾಜಿ ಆಲ್​ರೌಂಡರ್ ರೈನಾ, ಭಾರತೀಯ ಕ್ರಿಕೆಟ್​​ನಲ್ಲಿ ವಿಶೇಷ ಛಾಪು ಮೂಡಿಸಿದವರು. 2022ರ ಐಪಿಎಲ್​​​ನಿಂದಲೂ ಹೊರಗುಳಿದಿದ್ದ ರೈನಾ, 2023ರ ಟೂರ್ನಿಯಲ್ಲಿ ಕಾಣಿಸಿಕೊಳ್ಳಬಹುದು ಎಂಬ ಮಾತು ಕೇಳಿ ಬರುತ್ತಿತ್ತು. 2020ರಲ್ಲಿ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್‌ಬೈ ಹೇಳಿದ್ದರು.

ಮೂಲಗಳ ಪ್ರಕಾರ, ಸುರೇಶ್ ರೈನಾ ವಿದೇಶಿ ಕ್ರಿಕೆಟ್‌ ಲೀಗ್​​ಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಸೆಪ್ಟೆಂಬರ್‌ 10ರಂದು ಶುರುವಾಗಲಿರುವ ರೋಡ್‌ ಸೇಫ್ಟಿ ಸರಣಿಯಲ್ಲೂ ಪಾಲ್ಗೊಳ್ಳಲಿರುವ ರೈನಾ, ದಕ್ಷಿಣ ಆಫ್ರಿಕಾ, ಯುಎಇ ಮತ್ತು ಶ್ರೀಲಂಕಾದ ಫ್ರಾಂಚೈಸಿಗಳ ಪರ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ. ಐಪಿಎಲ್​​​ನಲ್ಲಿ 5 ಸಾವಿರ ರನ್​ ಗಡಿ ಪೂರೈಸಿದ ಮೊದಲ ಬ್ಯಾಟರ್​ ಎಂಬ ಹೆಗ್ಗಳಿಕೆಯೂ ಇವರದ್ದು. ರೈನಾ ಒಟ್ಟು 205 ಐಪಿಎಲ್‌ ಪಂದ್ಯಗಳನ್ನಾಡಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್​ ಪರ 176 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, 32.32ರ ಸರಾಸರಿಯಲ್ಲಿ 4,787 ರನ್ ಕಲೆ ಹಾಕಿದ್ದಾರೆ.

2005ರಿಂದ 2018ರವರೆಗೆ ಟೀಂ ಇಂಡಿಯಾ ಪರ ಬ್ಯಾಟ್​ ಬೀಸಿರುವ ಕ್ರಿಕೆಟಿಗ, 2005ರಲ್ಲಿ ಲಂಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಅಡಿ ಇಟ್ಟಿದ್ದರು. ಟೀಂ ಇಂಡಿಯಾ ಪರವಾಗಿ 18 ಟೆಸ್ಟ್​​, 226 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ಮಾದರಿಯ ಕ್ರಿಕೆಟ್‌ನಲ್ಲಿ ಕ್ರಮವಾಗಿ 768, 5,615 ಹಾಗೂ 1,605 ರನ್ ​​ಗಳಿಸಿದ್ದಾರೆ.

ABOUT THE AUTHOR

...view details