ದುಬೈ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ಏಷ್ಯಾ ಕಪ್ ಫೈನಲ್ ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳೊಂದಿಗೆ ಕೆಲವರು ಅನುಚಿತವಾಗಿ ವರ್ತಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಂಡಿಯಾ ಆರ್ಮಿ ಮತ್ತು ಟೀಂ ಇಂಡಿಯಾದ ಜರ್ಸಿ ಧರಿಸಿ ಫೈನಲ್ ಪಂದ್ಯ ವೀಕ್ಷಿಸಲು ಬಂದ ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶಿಸಲು ಅಲ್ಲಿದ್ದವರು ಅವಕಾಶ ನೀಡಲಿಲ್ಲ ಎಂದು ಆರೋಪಿಸಲಾಗಿದೆ.
ಈ ಕುರಿತಂತೆ ಭಾರತ್ ಆರ್ಮಿ ಟ್ವಿಟರ್ ಹ್ಯಾಂಡಲ್‌ನಿಂದ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳ ಗುಂಪು ವಿಡಿಯೋ ಹಂಚಿಕೊಂಡಿದೆ. ಇದರಲ್ಲಿ ಕುನಾಲ್ ಎಂಬ ವ್ಯಕ್ತಿ ಮಾತನಾಡಿ ಅಳಲು ತೋಡಿಕೊಂಡಿದ್ದಾರೆ. "ನಾವು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಹೊರಗಿರುವುದನ್ನು ನೀವು ನೋಡಬಹುದು. ಭಾರತೀಯ ಅಭಿಮಾನಿಯಾಗಿರುವ ನಮ್ಮನ್ನು ಸ್ಟೇಡಿಯಂನೊಳಗೆ ಬಿಡುತ್ತಿಲ್ಲ. ಇದು ನನಗೆ ಮಾತ್ರವಲ್ಲ, ಇತರ ಜನರಿಗೂ ಅನುಭವವಾಗಿದೆ. ನಾವು ಭಾರತದ ಜೆರ್ಸಿಯನ್ನು ಧರಿಸಿದ್ದರಿಂದ ಮೈದಾನದೊಳಗೆ ಬಿಡಲು ಅವಕಾಶ ನಿರಾಕರಿಸುತ್ತಿದ್ದಾರೆ. ಶ್ರೀಲಂಕಾ ಮತ್ತು ಪಾಕಿಸ್ತಾನದ ಅಭಿಮಾನಿಗಳನ್ನು ಮಾತ್ರ ಕ್ರೀಡಾಂಗಣದಲ್ಲಿ ಅನುಮತಿಸಬೇಕು ಎಂದು ಬಹುಶಃ ಸೂಚನೆಗಳಿವೆ ಎಂದು ನಾನು ಭಾವಿಸಿದ್ದೇನೆ" ಅವರು ದೂರಿದ್ದಾರೆ.
ಇದನ್ನೂ ಓದಿ:ಏಷ್ಯಾ ಕಪ್ ಕ್ರಿಕೆಟ್: ಚಾಂಪಿಯನ್ ಲಂಕಾ ತಂಡದ ಸಂಭ್ರಮ ಹೇಗಿತ್ತು? ವಿಡಿಯೋ ನೋಡಿ