ಪುಣೆ:ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಅಮೋಘ ಪ್ರದರ್ಶನ ನೀಡಿದ ವಿಂಡೀಸ್ ಆಲ್‌ರೌಂಡರ್ ಡಿಯಾಂಡ್ರ ಡಾಟಿನ್ ಅವರು ಸೂಪರ್‌ನೋವಾಸ್ ತಂಡ 3ನೇ ಬಾರಿಗೆ ಮಹಿಳಾ ಟಿ20 ಚಾಲೆಂಜ್ ಗೆಲ್ಲುವಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದರು. ನಿನ್ನೆ ಪುಣೆಯಲ್ಲಿ ನಡೆದ 'ಮಹಿಳಾ ಐಪಿಎಲ್' ಎಂದೇ ಪರಿಗಣಿಸಲಾದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೂಪರ್‌ನೋವಾಸ್ ತಂಡವು ವೆಲಾಸಿಟಿಗೆ 4 ರನ್‌ಗಳಿಂದ ಸೋಲುಣಿಸಿತು.
ಡಾಟಿನ್ 44 ಎಸೆತಗಳಲ್ಲಿ 62 ಗಳಿಸಿದ್ದು ಸೂಪರ್‌ನೋವಾಸ್ ಎದುರಾಳಿಗೆ 165 ರನ್ ಟಾರ್ಗೆಟ್ ನೀಡಲು ನೆರವಾಯಿತು. ಬೌಲಿಂಗ್ ಮೂಲಕವೂ ಈ ಬ್ಯಾಟರ್ ಮಿಂಚಿದರು. ನಾಲ್ಕು ಓವರ್‌ಗಳಲ್ಲಿ 2 ವಿಕೆಟ್ ಸಾಧನೆ ಮಾಡಿದರು. ಹಾಗಾಗಿ, ವೆಲಾಸಿಟಿ 8 ವಿಕೆಟ್ ನಷ್ಟಕ್ಕೆ 161 ಕಲೆ ಹಾಕಿ ಗೆಲುವಿನ ಸನಿಹದಲ್ಲಿ ಎಡವಿತು. ದಕ್ಷಿಣ ಆಫ್ರಿಕಾ ಬ್ಯಾಟರ್ ಲಾರಾ ವೊಲ್ವಾರ್ಟ್ ಏಕಾಂಗಿಯಾಗಿ ವೆಲಾಸಿಟಿ ಪರ ದಿಟ್ಟ ಹೋರಾಟ ನಡೆಸಿದರು. ಇವರು 40 ಎಸೆತಗಳಲ್ಲಿ 65 ರನ್ ಸಂಗ್ರಹಿಸಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ಬೇರೂರಿದ್ರೂ ತಂಡದ ಸಹ ಆಟಗಾರರ ಸೂಕ್ತ ಬೆಂಬಲ ಸಿಗದ ಕಾರಣ ಹೋರಾಟ ಫಲ ನೀಡಲಿಲ್ಲ.
10ನೇ ಕ್ರಮಾಂಕದ ಬ್ಯಾಟರ್ ಸಿಮ್ರಾನ್ ಬಹದ್ದೂರ್ 10 ಎಸೆತಗಳಲ್ಲಿ 20 ರನ್ ಚಚ್ಚಿದರು. 19ನೇ ಓವರ್‌ನಲ್ಲಿ ಬ್ಯಾಕ್ ಟು ಬ್ಯಾಕ್ 3 ಬೌಂಡರಿಗಳನ್ನು ಹೊಡೆದರು. ವೆಲಾಸಿಟಿ ಗೆಲ್ಲಲು ಕೊನೆಯ ಓವರ್‌ನಲ್ಲಿ 17 ರನ್ ಬೇಕಿತ್ತು. ಈ ಸಂದರ್ಭದಲ್ಲಿ ದಾಳಿಗಿಳಿದ ಎಡಗೈ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ಕೇವಲ 12 ನೀಡಿ ಸೂಪರ್‌ನೋವಾ ತಂಡಕ್ಕೆ ಗೆಲುವು ತಂದಿಟ್ಟರು. ಪಂದ್ಯದ ಮೊದಲಾರ್ಧದಲ್ಲಿ ಈ ಇಂಗ್ಲಿಷ್ ಬೌಲರ್ ವೆಲಾಸಿಟಿಯನ್ನು ಕಾಡಿದ್ರೆ ಆಸ್ಟ್ರೇಲಿಯಾ ಲೆಗ್ ಸ್ಪಿನ್ನರ್ ಅಲನಾ ಕಿಂಗ್ (3/32) ಮೂಲಕ ಬ್ಯಾಕ್‌ಎಂಡ್‌ನಲ್ಲಿ ತಂಡಕ್ಕೆ ಮಾರಕವಾದರು. ತಾವು ಎಸೆದ 16ನೇ ಓವರ್‌ನಲ್ಲಿ ಕಿಂಗ್ ಅವರಿಗೆ ಹ್ಯಾಟ್ರಿಕ್ ವಿಕೆಟ್ ಸಾಧಿಸುವ ಅವಕಾಶವಿತ್ತು.