ಬೆಂಗಳೂರು:ಕ್ರಿಕೆಟ್ ಅನ್ನೋದೇ ಹಾಗೆ.. ಮೈದಾನದಲ್ಲಿ ಒಂದು ಪಂದ್ಯ ಒಂದೊಳ್ಳೆ ಪ್ರದರ್ಶನ ನೀಡೋ ಆಟಗಾರನಿಗೆ ಖ್ಯಾತಿ ತಂದುಕೊಡಬಲ್ಲದು. ಇಂದಿನ ಚುಟುಕು ಕ್ರಿಕೆಟ್ ಯುಗದಲ್ಲಿ ಪ್ರತಿಭೆಗಳು ಒಂದೊಂದಾಗಿ ಹೊರ ಬೀಳುತ್ತಿವೆ. ಇದಕ್ಕೆ ನಮ್ಮಲ್ಲೇ ಸ್ಪಷ್ಟ ಉದಾಹರಣೆಯೆಂದರೆ ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಪ್ರಸಿಧ್ ಕೃಷ್ಣ ಸೇರಿದಂತೆ ಅನೇಕ ಆಟಗಾರರ ಪ್ರದರ್ಶನ. ಇವರೆಲ್ಲರೂ ಕರ್ನಾಟಕದಲ್ಲಿ ಮಿಂಚಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದು ಖ್ಯಾತಿಗಳಿಸಿರುವ ಆಟಗಾರರು. ಸದ್ಯ ಈ ಸರತಿ ಸಾಲಿನಲ್ಲಿ ಎಲ್ಆರ್ ಚೇತನ್ ಎಂಬ ಆಟಗಾರನೂ ಒಬ್ಬ..
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಹಾರಾಜ ಟ್ರೋಫಿ ಕ್ರಿಕೆಟ್ 2022 ಪಂದ್ಯಾವಳಿಯಲ್ಲಿ ತಮ್ಮ ಅದ್ಬುತ ಪ್ರದರ್ಶನದ ಮೂಲಕ ಎಲ್ಆರ್ ಚೇತನ್ ಮನೆ ಮಾತಾಗಿದ್ದಾರೆ. ತಮ್ಮ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮೂಲಕ ಎಲ್ಆರ್ ಚೇತನ್ ಮುಂಬರುವ ಐಪಿಎಲ್ ಟೂರ್ನಿಯಲ್ಲಿಯೂ ಭಾರಿ ಮೊತ್ತಕ್ಕೆ ಬಿಕರಿಯಾಗುವ ಮುನ್ಸೂಚನೆ ನೀಡಿದ್ದಾರೆ.
ಎಲ್ಆರ್ ಚೇತನ್ ಯಾರು?: 22 ವರ್ಷದ ಚೇತನ್ ಮೈಸೂರಿನ ಕೆ.ಆರ್ ನಗರದವರು. ತಂದೆ ರೇವಣ್ಣ ಕೆಎಸ್ಆರ್ಪಿ ಹೆಡ್ ಕಾನ್ಸ್‌ಟೇಬಲ್. ಮಹಾರಾಜ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿರುವ ಚೇತನ್ 2017 - 18ರ ಕೆಪಿಎಲ್ ಟೂರ್ನಿ ಸಂದರ್ಭದಲ್ಲಿ ಬೌಂಡರಿ ಸಮೀಪ ನಿಲ್ಲುತ್ತಿದ್ದ ಬಾಲ್ ಬಾಯ್ ಎಂದರೆ ನೀವು ನಂಬಲೇಬೇಕು. ಅಂದಿನಿಂದಲೂ ಕ್ರಿಕೆಟ್ ಮೈಗೂಡಿಸಿಕೊಂಡು ಅಭ್ಯಸಿಸುತ್ತಾ ಬಂದ ಚೇತನ್ಗೆ ಪೋಷಕರಿಂದ ಸಿಕ್ಕ ಬೆಂಬಲದ ಫಲವಾಗಿ 2019ರಲ್ಲಿ ಮೈಸೂರು ವಾರಿಯರ್ಸ್ ತಂಡಕ್ಕೆ ಆಯ್ಕೆಯಾದರು.
ಮೈಸೂರು ತಂಡದಲ್ಲಿ ಸ್ಥಾನ ಸಿಕ್ಕರೂ ಎಲ್ಆರ್ ಚೇತನ್ಗೆ ತಮ್ಮ ಪ್ರತಿಭೆ ಪ್ರದರ್ಶನಕ್ಕಾಗಿ ಸೂಕ್ತ ಅವಕಾಶ ಸಿಕ್ಕಿರಲಿಲ್ಲ. ಆದರೆ, ಈ ಬಾರಿಯ ಮಹಾರಾಜ ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಪರ ಕಣಕ್ಕಿಳಿದಿರುವ ಚೇತನ್ ಅನುಭವಿ ಮಯಾಂಕ್ ಅಗರ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸುವ ಅವಕಾಶವನ್ನ ಎರಡೂ ಕೈಗಳಿಂದ ಬಾಚಿ ತಬ್ಬಿಕೊಂಡಿದ್ದಾರೆ.