ಮುಂಬೈ: 2021ರ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಭವಿಷ್ಯದಲ್ಲಿ ಒಬ್ಬ ಅದ್ಭುತ ನಾಯಕನಾಗಲಿದ್ದಾನೆ ಎಂದು ದಂತಕತೆ ಸುನೀಲ್ ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ.
ಡೆಲ್ಲಿ ತಂಡದ ಖಾಯಂ ನಾಯಕ ಶ್ರೇಯಸ್ ಅಯ್ಯರ್ ಗಾಯಗೊಂಡು ಐಪಿಎಲ್ನಿಂದ ಹೊರಬಿದ್ದಿದ್ದರಿಂದ ರಿಷಬ್ ಪಂತ್ಗೆ ನಾಯಕತ್ವವಹಿಸಲಾಗಿತ್ತು. ಅವರು ಡೆಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಅಗ್ರಸ್ಥಾನಕ್ಕೆ ಕೊಂಡೊಯ್ದಿದ್ದರು. ಪಂತ್ ನಾಯಕನಾಗಿ ಕಲಿತು ಸಾಕಷ್ಟು ಬುದ್ದಿವಂತನಾಗಿದ್ದಾರೆ. ಆತ ಐಪಿಎಲ್ನಲ್ಲಿ ನಾಯಕತ್ವದ ಕಿಚ್ಚನ್ನು ತೋರಿಸಿದ್ದಾನೆ ಎಂದು ಸ್ಪೋರ್ಟ್ಸ್ ಸ್ಟಾರ್ಗೆ ಬರೆದ ತಮ್ಮ ಅಂಕಣದಲ್ಲಿ ತಿಳಿಸಿದ್ದಾರೆ.
"ಯಂಗ್ ರಿಷಭ್ ಪಂತ್ ನೇತೃತ್ವದ ತಂಡ ದೆಹಲಿ ಕ್ಯಾಪಿಟಲ್ಸ್ ಎದ್ದುಕಾಣುವ ಒಂದು ತಂಡವಾಗಿ ನಿಂತಿತ್ತು. ಆರನೇ ಪಂದ್ಯದ ಸಮಯದಲ್ಲಿ ನಾಯಕತ್ವ ನಿರ್ವಹಣೆ ಬಗ್ಗೆ ಕೇಳಿದಾಗ, ಅವರು ಆಯಾಸಗೊಂಡವರಂತೆ ಕಂಡುಬಂದಿದ್ದನ್ನು ನೀವು ನೋಡಿರಬಹುದು. ಆಟದ ನಂತರದ ಸಮಾರಂಭದಲ್ಲಿ ಪ್ರತಿಯೊಬ್ಬ ನಿರೂಪಕರು ಅವರಿಗೆ ಅದೇ ಪ್ರಶ್ನೆ ಕೇಳುತ್ತಿದ್ದರು. ಆದರೆ ಮುಂದೆ ಆತ ಇದೇ ಕಿಡಿಯನ್ನು ತೋರಿಸುತ್ತಾ ತಮ್ಮ ನೈಸರ್ಗಿಕ ಆಟವನ್ನು ಆಡಿದರೆ ಖಂಡಿತ ಆತ ಘರ್ಜಿಸುವ ಬೆಂಕಿಯಾಗಬಹುದು" ಎಂದು ಗವಾಸ್ಕರ್ ಹೇಳಿದ್ದಾರೆ.