ನವದೆಹಲಿ:ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಬೌಲರ್ಗಳ ವೈಫಲ್ಯ ತಂಡಕ್ಕೆ ಮುಳುವಾಗಿದೆ. ಮೊದಲ ಪಂದ್ಯದಲ್ಲಿ 200ಕ್ಕೂ ಅಧಿಕ ರನ್ ಗಳಿಸಿದ ಹೊರತಾಗಿಯೂ ತಂಡ ಸೋತರೆ, 2ನೇ ಪಂದ್ಯದಲ್ಲಿ ಬೌಲಿಂಗ್ ಜೊತೆಗೆ ಬ್ಯಾಟರ್ಗಳು ಕೂಡ ಕೈಕೊಟ್ಟಿದ್ದರು. ಭಾರತ ತಂಡದ ಕಳಪೆ ಆಟಕ್ಕೆ ಹಿರಿಯ ಆಟಗಾರರು ಕಿಡಿಕಾರಿದ್ದಾರೆ. ಅದರಲ್ಲೂ ಬೌಲಿಂಗ್ ವಿಭಾಗ ಸಂಪೂರ್ಣ ನೆಲಕಚ್ಚಿದ್ದು ಕೆಂಗಣ್ಣಿಗೆ ಗುರಿಯಾಗಿದೆ.
ದ. ಆಫ್ರಿಕಾ ವಿರುದ್ಧ ವಿಕೆಟ್ ಪಡೆಯುವ ಬೌಲರ್ಗಳೇ ಭಾರತ ತಂಡದಲ್ಲಿಲ್ಲ. ಕಳೆದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ವಿಕೆಟ್ ಪಡೆದಿದ್ದು, ಬಿಟ್ಟರೆ ಉಳಿದ್ಯಾವ ಆಟಗಾರರು ಕೂಡ ವಿಕೆಟ್ ಪಡೆದುಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ ಎಂದು ಮಾಜಿ ಹಿರಿಯ ಆಟಗಾರ ಸುನೀಲ್ ಗವಾಸ್ಕರ್ ಬೌಲರ್ಗಳ ಕಳಪೆ ಆಟದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಗವಾಸ್ಕರ್, ಎದುರಾಳಿಯ ವಿಕೆಟ್ ಪಡೆದರೆ ಮಾತ್ರ ಪಂದ್ಯದ ಮೇಲೆ ಒತ್ತಡ ಹೇರಲು ಸಾಧ್ಯ. ಭುವನೇಶ್ವರ್ ಕುಮಾರ್ ಮಾತ್ರ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಉಳಿದ ಯಾವ ಬೌಲರ್ಗಳೂ ಹರಿಣಗಳ ಮುಂದೆ ತಮ್ಮ ಸಾಮರ್ಥ್ಯ ತೋರಿಸುತ್ತಿಲ್ಲ. ಮೊದಲ ಪಂದ್ಯದಲ್ಲಿ 211 ರನ್ ಗಳಿಸಿದಾಗ್ಯೂ ಸೋಲುಂಡಿರುವುದು ತಂಡದ ಬೌಲಿಂಗ್ ವಿಭಾಗದ ಕಳಪೆ ಪ್ರದರ್ಶನವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಒಡಿಶಾದ ಕಟಕ್ನಲ್ಲಿ ನಡೆದ 2ನೇ ಪಂದ್ಯದಲ್ಲಿ ಭಾರತ ಸಮತಟ್ಟಾದ ಪಿಚ್ ಮಧ್ಯೆಯೂ ನಿಧಾನಗತಿ ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 148 ಸಾಧಾರಣ ಮೊತ್ತ ಕಲೆಹಾಕಿತ್ತು. ದಕ್ಷಿಣ ಆಫ್ರಿಕಾ ತಂಡ 18.2 ಓವರ್ಗಳಲ್ಲಿ ಸವಾಲು ಮೆಟ್ಟಿ ನಿಂತು ಜಯ ಸಾಧಿಸಿತು.
ಇದನ್ನೂ ಓದಿ:'ದಿನೇಶ್ ಕಾರ್ತಿಕ್ ಬದಲಿಗೆ ಅಕ್ಷರ್ ಪಟೇಲ್ ಕ್ರೀಸ್ಗೆ ಹೋಗಿದ್ದು ನಿಮಗೆ ತಪ್ಪಾಗಿ ಕಾಣಿಸಬಹುದು'! ಆದರೆ?