ಕಾಬೂಲ್(ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ಕಾಬೂಲ್ನ ಅಂತಾರಾಷ್ಟ್ರೀಯ ಮೈದಾನದಲ್ಲಿ ಸ್ಥಳೀಯ ಟಿ-20 ಪಂದ್ಯ ನಡೆಯುತ್ತಿದ್ದ ವೇಳೆ ಬಾಂಬ್ ಸ್ಫೋಟಗೊಂಡಿದೆ. ಪರಿಣಾಮ ಗ್ಯಾಲರಿಯಲ್ಲಿ ಕುಳಿತುಕೊಂಡಿದ್ದ ನಾಲ್ವರು ಗಾಯಗೊಂಡಿದ್ದಾಗಿ ವರದಿಯಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಕಾಬೂಲ್ನ ಕ್ರಿಕೆಟ್ ಮೈದಾನದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಗೊಂಡಿದೆ ಎಂದು ವರದಿಯಾಗಿದ್ದು, ಈ ವೇಳೆ ಟಿ-20 ಪಂದ್ಯ ನಡೆಯುತ್ತಿತ್ತು. ಕ್ರೀಡಾಂಗಣ ಸಂಪೂರ್ಣವಾಗಿ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು.
ಪಾಮಿರ್ ಝಲ್ಮಿ ಮತ್ತು ಬ್ಯಾಂಡ್ ಎ ಅಮೀರ್ ಡ್ರಾಗನ್ಸ್ ತಂಡಗಳ ನಡುವೆ ಶಪೇಜಾ ಕ್ರಿಕೆಟ್ ಲೀಗ್‌ನ 22 ನೇ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಎರಡು ತಂಡದ ಪ್ಲೇಯರ್ಸ್ಗಳನ್ನ ಬಂಕರ್ನೊಳಗೆ ಸುರಕ್ಷಿತವಾಗಿ ಕರೆದೊಯ್ಯಲಾಗಿದೆ. ವಿಶೇಷವೆಂದರೆ ಈ ಪಂದ್ಯ ನಡೆಯುತ್ತಿದ್ದ ವೇಳೆ ವಿಶ್ವಸಂಸ್ಥೆಯ ಅಧಿಕಾರಿಗಳು ಸಹ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ. ಬಾಂಬ್ ಸ್ಫೋಟಗೊಂಡಿರುವ ಬಗ್ಗೆ ಎಸಿಬಿಯ ಮುಖ್ಯ ಕಾರ್ಯನಿರ್ವಾಹಕ ನಸೀಬ್ ಖಾನ್ ಪ್ರಕಟಣೆಯಲ್ಲಿ ಖಚಿತ ಪಡಿಸಿದ್ದು, ಸಿಬ್ಬಂದಿ ಹಾಗೂ ಆಟಗಾರರು ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.