ನವದೆಹಲಿ: ಟೀಂ ಇಂಡಿಯಾ ಆಲ್‌ರೌಂಡರ್, ಕನ್ನಡಿಗ ಸ್ಟುವರ್ಟ್ ಬಿನ್ನಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಉತ್ತಮ ಬೌಲಿಂಗ್ ದಾಖಲೆ ಹೊಂದಿರುವ ಬಿನ್ನಿ ಪ್ರಥಮ ದರ್ಜೆಯ ಕ್ರಿಕೆಟ್‌ಗೂ ಗುಡ್ ಬೈ ಹೇಳಿದ್ದಾರೆ.
ಕರ್ನಾಟಕದಲ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನ ಆರಂಭಿಸಿದ್ದ 37 ವರ್ಷದ ಕ್ರಿಕೆಟಿಗ, ಟೀಂ ಇಂಡಿಯಾ ಪರ 6 ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳು, 14 ಏಕದಿನ ಹಾಗೂ 12 ಟಿ-20 ಪಂದ್ಯಗಳನ್ನು ಆಡಿದ್ದಾರೆ. 'ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿರುವುದು ನನಗೆ ಅಪಾರ ಸಂತೋಷ ಮತ್ತು ಹೆಮ್ಮೆ ನೀಡಿದೆ' ಎಂದು ಬಿನ್ನಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕನ್ನಡಿಗ ಸ್ಟುವರ್ಟ್ ಬಿನ್ನಿ ವಿದಾಯ ತಂಡದ ಪರ ಹೇಳಿಕೊಳ್ಳುವ ರನ್ ಸಾಧನೆ ಇಲ್ಲದೇ ಇದ್ದರೂ, ಬೌಲಿಂಗ್‌ನಲ್ಲಿ ದಾಖಲೆ ಹೊಂದಿರುವ ಬಿನ್ನಿ 2014ರ ಜೂನ್‌ನಲ್ಲಿ ಢಾಕಾದಲ್ಲಿ ಬಾಂಗ್ಲಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 4 ರನ್ 6 ವಿಕೆಟ್‌ಗಳನ್ನು ಪಡೆದಿದ್ದರು. ಈವರೆಗೆ ಏಕದಿನ ಕ್ರಿಕೆಟ್‌ನಲ್ಲಿ ಇದು ದಾಖಲೆಯಾಗಿಯೇ ಉಳಿದಿದೆ. 94 ಪ್ರಥಮ ದರ್ಜೆಯ ಪಂದ್ಯಗಳನ್ನಾಡಿದ್ದ ಆಲ್‌ರೌಂಡರ್‌ಗೆ 2014ರ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡುವ ಅವಕಾಶವನ್ನು ಅಂದಿನ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ನೀಡಿದ್ದರು. ಆ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ 78 ರನ್‌ಗಳಿಸಿದ್ದರು.
ವೆಸ್ಟ್ ಇಂಡೀಸ್ ವಿರುದ್ಧ ಫ್ಲೋರಿಡಾದಲ್ಲಿ ನಡೆದಿದ್ದ ಟಿ-20 ಪಂದ್ಯದಲ್ಲಿ ಇವಿನ್ ಲೂಯಿಸ್‌ಗೆ ಒಂದೇ ಓವರ್‌ನಲ್ಲಿ ಬಿನ್ನಿ 31 ರನ್ ಬಿಟ್ಟುಕೊಟ್ಟು ದುಬಾರಿ ಬೌಲರ್ ಎನಿಸಿಕೊಂಡಿದ್ದರು. ಆ ಓವರ್‌ನಲ್ಲಿ ಲೂಯಿಸ್ 5 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಬಿನ್ನಿಗೆ ಅದೇ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಸ್ಟುವರ್ಟ್ ಬಿನ್ನಿ ಅವರ ತಂದೆ ರೋಜರ್ ಬಿನ್ನಿ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರೂ ಆಗಿದ್ದರು.
ತನ್ನ ಕ್ರಿಕೆಟ್ ಕರಿಯರ್‌ನಲ್ಲಿ ಸಹಕಾರ ನೀಡಿದ ಬಿಸಿಸಿಐ, ಕೋಚ್‌ಗಳು, ಸಹ ಆಟಗಾರರು ಹಾಗೂ ಇತರೆ ತಂಡಗಳಿಗೆ ಧನ್ಯವಾದಗಳು ಎಂದು ಸ್ಟುವರ್ಟ್ ಬಿನ್ನಿ ಹೇಳಿದ್ದಾರೆ.