ದುಬೈ: 2016 ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೆಣಸಾಡಿದ್ದ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಮತ್ತು ರನ್ನರ್ಸ್ ಅಪ್ ಇಂಗ್ಲೆಂಡ್ ಶನಿವಾರ ನಡೆಯಲಿರುವ ಸೂಪರ್ 12ಪಂದ್ಯದಲ್ಲಿ ಎದುರಾಗಲಿವೆ. ಇಲ್ಲಿಯವರೆಗೆ ವಿಶ್ವಕಪ್ನಲ್ಲಿ ಆಡಿರುವ 5 ಪಂದ್ಯಗಳಲ್ಲಿ ಇಂಗ್ಲೆಂಡ್ ಸೋಲು ಕಂಡಿದ್ದು, ಈ ವರ್ಷವಾದರೂ ಅಷ್ಟೇನೂ ಬಲಿಷ್ಠವಾಗಿರದ ವಿಂಡೀಸ್ ವಿರುದ್ಧ ಗೆಲುವು ಸಾಧಿಸಲು ಇಂಗ್ಲೆಂಡ್ ಎದುರು ನೋಡುತ್ತಿದೆ.
2016ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಕಾರ್ಲೋಸ್ ಬ್ರಾತ್‌ವೇಟ್ ಅವರ ಸ್ಫೋಟಕ ಬ್ಯಾಟಿಂಗ್ನ ನೆರವಿನಿಂದ 4 ವಿಕೆಟ್ಗಳಿಂದ ಗೆದ್ದು 2ನೇ ಟಿ20 ವಿಶ್ವಕಪ್ ಎತ್ತಿ ಹಿಡಿದಿತ್ತು. ಇದೀಗ 5 ವರ್ಷಗಳ ಬಳಿಕ ನಡೆಯುತ್ತಿರುವ ಚುಟುಕು ಮಹಾಸಮರದಲ್ಲಿ ಎರಡೂ ತಂಡಗಳು ಮತ್ತೆ ಎದುರುಬದುರಾಗುತ್ತಿವೆ.
ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟರ್ಗಳ ದಂಡನ್ನೇ ಹೊಂದಿದೆಯಾದರೂ ಅಭ್ಯಾಸ ಪಂದ್ಯಗಳಲ್ಲಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದೆದುರು ಸೋಲು ಕಂಡು ನಿರಾಶೆಯನುಭವಿಸಿದೆ. ಮೊನಚಿಲ್ಲದ ಬೌಲಿಂಗ್ ದಾಳಿ, ಸ್ಪಿನ್ನರ್ಗಳನ್ನೆದುರಿಸುವ ಸಾಮರ್ಥ್ಯದಲ್ಲಿ ವಿಂಡೀಸ್ ಭಾರಿ ಹಿನ್ನಡೆ ಸಾಧಿಸಿದೆ.
ಇತ್ತ 2010ರ ಚಾಂಪಿಯನ್ ಇಂಗ್ಲೆಂಡ್ ಅಭ್ಯಾಸ ಪಂದ್ಯಗಳಲ್ಲಿ ಮಿಶ್ರ ಫಲಿತಾಂಶ ಪಡೆದಿದೆ. ಮೊದಲ ಪಂದ್ಯದಲ್ಲಿ ಬಲಿಷ್ಠ ಭಾರತದೆದುರು ಸೋಲು ಕಂಡರೆ, ಎರಡನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಜಯ ಸಾಧಿಸಿದೆ. ಪ್ರಸ್ತುತ ತಂಡಗಳ ಪ್ರದರ್ಶನ, ಬಲಾಬಲ ನೋಡಿದರೆ ಇಂಗ್ಲೆಂಡ್ ತಂಡವೇ ಈ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಲಿದೆ.