ಮೆಲ್ಬೋರ್ನ್ (ಆಸ್ಟ್ರೇಲಿಯಾ): ಮಾರ್ಚ್ 17 ರಿಂದ ಆರಂಭವಾಗುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಗೆ ಸ್ಟೀವ್ ಸ್ಮಿತ್ ನಾಯಕತ್ವ ಮುಂದುವರೆಯಲಿದೆ. ಕಳೆದ ವಾರ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದ ಪ್ಯಾಟ್ ಕಮಿನ್ಸ್ ತಾಯಿ ಮರಿಯಾ ನಿಧನರಾಗಿದ್ದರು ಈ ಕಾರಣ ಅವರು ಮನೆಯಲ್ಲೇ ಕೆಲ ಸಮಯ ಕಳೆಯಲಿಚ್ಛಿಸಿದ್ದಾರೆ ಎಂದು ಕೋಚ್ ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ನಂತರ ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾಕ್ಕೆ ಮರಳಿದ್ದರು. ಮೂರು ಮತ್ತು ನಾಲ್ಕನೇ ಟೆಸ್ಟ್ನ್ನು ಸ್ಟೀವ್ ಸ್ಮಿತ್ ಮುನ್ನಡೆಸಿದ್ದರು. ಎರಡು ಪಂದ್ಯದ ನಂತರ ಆಸಿಸ್ ಟೆಸ್ಟ್ ಸರಣಿಯಲ್ಲಿ 2-0 ಯಲ್ಲಿತ್ತು. ಸ್ಮಿತ್ ನಾಯಕತ್ವದಲ್ಲಿ ಇಂದೋರ್ನಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿತ್ತು. ಅಹಮದಾಬಾದ್ನಲ್ಲಿ ನಡೆದ ಅಂತಿಮ ಟೆಸ್ಟ್ ನಿನ್ನೆ ಡ್ರಾದಲ್ಲಿ ಅಂತ್ಯವಾಯಿತು.
ಪ್ಯಾಟ್ ಕಮಿನ್ಸ್ ಈ ದುಃಖಕರ ಸಂದರ್ಭದಲ್ಲಿ ಅವರ ಕುಟುಂಬದ ಜೊತೆ ಇರಲಿ ಎಂದು ನಾವು ಭಾವಿಸಿದ್ದೇವೆ. ತಂಡದಲ್ಲಿ ಕಮಿನ್ಸ್ ಬದಲಿಗೆ ಯಾರನ್ನು ತಂಡಕ್ಕೆ ಸೇರಿಸಿಕೊಂಡಿಲ್ಲ. ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ಝೈ ರಿಚರ್ಡ್ಸನ್ ಅವರ ಬದಲಿಯಾಗಿ ನಾಥನ್ ಎಲ್ಲಿಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಆಸ್ಟ್ರೇಲಿಯಾ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಕೊನೆಯ ಐದು ಏಕದಿನ ಪಂದ್ಯಗಳಿಗೆ ಬೇರೆ ಬೇರೆ 4 ನಾಯಕರನ್ನು ಆಯ್ಕೆ ಮಾಡಿಕೊಂಡಿದೆ. ಭಾರತ ವಿರುದ್ಧದ ಪಂದ್ಯಕ್ಕೆ ಸ್ಮಿತ್ ನಾಯಕತ್ವ ನೀಡಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯ ನಂತರ ಆರನ್ ಫಿಂಚ್ ನಿವೃತ್ತರಾದ ಬಳಿಕ ಕಮಿನ್ಸ್ಗೆ ನಾಯಕತ್ವ ನೀಡಲಾಗಿತ್ತು. ನವೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯಕ್ಕೆ ಕಮಿನ್ಸ್ಗೆ ವಿಶ್ರಾಂತಿ ನೀಡಿದ ಕಾರಣ ತಂಡವನ್ನು ಜೋಶ್ ಹ್ಯಾಜಲ್‌ವುಡ್ ಮುನ್ನಡೆಸಿದರು. ಗಾಯ ಸಮಸ್ಯೆಯಿಂದ ಜೋಶ್ ಹ್ಯಾಜಲ್‌ವುಡ್ ಭಾರತದ ಸರಣಿಗೆ ಆಯ್ಕೆಯಾಗಿಲ್ಲ. ಹೀಗಾಗಿ ಸ್ಮಿತ್ ಹೆಗಲಿಗೆ ನಾಯಕತ್ವದ ಹೊರೆ ಬಿದ್ದಿದೆ. ಸ್ಮಿವ್ ಸ್ಮಿತ್ ಈ ಹಿಂದೆ 51 ಏಕದಿನ ಪಂದ್ಯಗಳ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ.