ನವದೆಹಲಿ:ಇಂದೋರ್‌ನಲ್ಲಿ ಮಾರ್ಚ್ 1 ರಿಂದ ಪ್ರಾರಂಭವಾಗುವ ಭಾರತದೆದುರಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಪ್ಯಾಟ್ ಕಮಿನ್ಸ್ ಅಲಭ್ಯರಾಗಿದ್ದು, ಸ್ಟೀವ್ ಸ್ಮಿತ್‌ಗೆ ಕ್ಯಾಪ್ಟನ್ ಜವಾಬ್ದಾರಿ ನೀಡಲಾಗಿದೆ. ತಾಯಿ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಎರಡನೇ ಟೆಸ್ಟ್ ಪಂದ್ಯದ ನಂತರ ಕಮಿನ್ಸ್ ಸಿಡ್ನಿಗೆ ತೆರಳಿದ್ದರು. "ನಾನು ಕುಟುಂಬದೊಂದಿಗೆ ಇರಬೇಕಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ನನ್ನ ಸಹ ಆಟಗಾರರಿಂದ ನನಗೆ ದೊರೆತಿರುವ ಅಗಾಧ ಬೆಂಬಲಕ್ಕೆ ಧನ್ಯವಾದ ಹೇಳುತ್ತೇನೆ" ಎಂದು ಕಮ್ಮಿನ್ಸ್ ಹೇಳಿದ್ದಾರೆ.
ಇನ್ನೊಂದೆಡೆ, 29ರ ಹರೆಯದ ವೇಗಿಯ ಅನುಪಸ್ಥಿತಿ ಆಸ್ಟ್ರೇಲಿಯಾ ತಂಡದ ತಲೆನೋವು ಹೆಚ್ಚಿಸಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ತಂಡಕ್ಕೆ ಗಾಯದ ಸಮಸ್ಯೆಯೂ ಕಾಡುತ್ತಿದೆ. ಇದಕ್ಕೂ ಮುನ್ನ ವೇಗಿ ಜೋಶ್ ಹೇಜಲ್‌ವುಡ್ ಮತ್ತು ಆರಂಭಿಕ ಡೇವಿಡ್ ವಾರ್ನರ್ ಗಾಯದಿಂದಾಗಿ ತವರಿಗೆ ಮರಳಿದ್ದರು. ಮಿಚೆಲ್ ಸ್ಟಾರ್ಕ್ ಅಥವಾ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ತಂಡ ಸೇರುವ ನಿರೀಕ್ಷೆ ಇದೆ.