ಕರ್ನಾಟಕ

karnataka

ETV Bharat / sports

England vs Australia, Ashes 2nd Test: ಆ್ಯಶಸ್ ಸರಣಿ- ಲಾರ್ಡ್ಸ್‌​​ನಲ್ಲಿ ದಾಖಲೆಗಳ ಸುರಿಮಳೆ ಸೃಷ್ಟಿಸಿದ ಸ್ಟೀವ್ ಸ್ಮಿತ್! - ಲಾರ್ಡ್ಸ್ ಮೈದಾನ

ಆ್ಯಶಸ್ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ.

steve-smith
ಸ್ಟೀವ್ ಸ್ಮಿತ್

By

Published : Jun 29, 2023, 10:57 PM IST

ಲಂಡನ್:ಇಲ್ಲಿನಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಎಡಗೈ ಬ್ಯಾಟರ್​ ಸ್ಟೀವ್ ಸ್ಮಿತ್ ಭರ್ಜರಿ ಶತಕ ಸಿಡಿಸಿದರು. ಇದು ಡ್ಯಾಶಿಂಗ್ ಬ್ಯಾಟರ್ ಸ್ಮಿತ್ 32ನೇ ಟೆಸ್ಟ್ ಶತಕವಾಗಿದ್ದು, ಇದರೊಂದಿಗೆ ಹಲವು ದಾಖಲೆಗಳನ್ನೂ ಅವರು ನಿರ್ಮಿಸಿದ್ದಾರೆ.

ಎರಡನೇ ಟೆಸ್ಟ್‌ನ ಮೊದಲ ದಿನದಾಟದ ಅಂತ್ಯಕ್ಕೆ 85 ರನ್ ಗಳಿಸಿದ್ದ ಸ್ಮಿತ್, ಇಂದು 169 ಎಸೆತಗಳಲ್ಲಿ ತಮ್ಮ ಟೆಸ್ಟ್ ವೃತ್ತಿ ಜೀವನದ 32ನೇ ಶತಕ ಪೂರೈಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗದ 32 ಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಟೆಸ್ಟ್ ಸ್ಪೆಷಲಿಸ್ಟ್ ಪಾತ್ರರಾದರು. ತಮ್ಮ ಕ್ರಿಕೆಟ್ ವೃತ್ತಿಬದುಕಿನ 99ನೇ ಟೆಸ್ಟ್‌ನ 174ನೇ ಇನ್ನಿಂಗ್ಸ್‌ನಲ್ಲಿ ಸ್ಮಿತ್​ ಈ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ ಪರ 32 ಟೆಸ್ಟ್ ಶತಕಗಳನ್ನು ಬಾರಿಸಿದ ಸ್ಟೀವ್ ವಾ ಅವರ ದಾಖಲೆಯನ್ನೂ ಸ್ಮಿತ್ ಸರಿಗಟ್ಟಿದ್ದಾರೆ. ಮಾಜಿ ನಾಯಕ ರಿಕಿ ಪಾಂಟಿಂಗ್ ಟೆಸ್ಟ್​ನಲ್ಲಿ 41 ಶತಕಗಳನ್ನು ಸಿಡಿಸಿದ ಆಸೀಸ್​ ತಂಡದ ಸರ್ವಶ್ರೇಷ್ಠ ಆಟಗಾರರಾಗಿದ್ದಾರೆ.

ಆ್ಯಶಸ್ ಸರಣಿಯಲ್ಲಿ 12ನೇ ಸೆಂಚುರಿ: ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್​ ಸರಣಿ ಆ್ಯಶಸ್​ನಲ್ಲಿ ಸ್ಮಿತ್ 12ನೇ ಶತಕ ಬಾರಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್​ನ ಜ್ಯಾಕ್ ಹಾಬ್ಸ್ ದಾಖಲೆ ಸರಿಗಟ್ಟಿದ್ದಾರೆ. ದಿಗ್ಗಜ ಆಟಗಾರ ಡಾನ್ ಬ್ರಾಡ್ಮನ್ ಆ್ಯಶಸ್ ಸರಣಿಯಲ್ಲಿ 19 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಜ್ಯಾಕ್ ಹಾಬ್ಸ್ ಹಾಗೂ ಸ್ಮಿತ್ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.

ಲಾರ್ಡ್ಸ್ ಟೆಸ್ಟ್​- ಸ್ಮಿತ್ ಶತಕ ವೈಭವ: ಹತ್ತು ವರ್ಷಗಳ ಹಿಂದೆ ಅಂದರೆ 2013ರಲ್ಲಿ ಲಾರ್ಡ್ಸ್‌​​ನಲ್ಲಿ ಸ್ಮಿತ್ ಟೆಸ್ಟ್​ಗೆ ಪದಾರ್ಪಣೆ ಮಾಡಿದ್ದರು. ಈಗ ಇದೇ ಮೈದಾನದಲ್ಲಿ 32ನೇ ಟೆಸ್ಟ್ ಶತಕ ಬಾರಿಸಿದ್ದಾರೆ. ಈ ಶತಕದೊಂದಿಗೆ ಲಾರ್ಡ್ಸ್ ಮೈದಾನದಲ್ಲಿ ಆಸ್ಟ್ರೇಲಿಯಾ ಪರ ಒಂದಕ್ಕಿಂತ ಹೆಚ್ಚು ಟೆಸ್ಟ್​ ಶತಕ ಸಿಡಿಸಿದ ನಾಲ್ಕನೇ ಬ್ಯಾಟರ್​ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ವಾರೆನ್ ಬಾರ್ಡ್​ಸ್ಲೇ (1912, 1926), ಸರ್ ಡಾನ್ ಬ್ರಾಡ್ಮನ್ (1930, 1938) ಮತ್ತು ಬಿಲ್​ ಬ್ರೌನ್ (1934, 1938) ಲಾಡ್ಸ್​​ನಲ್ಲಿ ಬಹು ಸೆಂಚುರಿ ಸಿಡಿಸಿದ ದಾಖಲೆ ಹೊಂದಿದ್ದಾರೆ.

ಶತಕದಲ್ಲಿ ರೋಹಿತ್​ ಹಿಂದಿಕ್ಕಿದ ಸ್ಮಿತ್​:ಅಲ್ಲದೇ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಆಸೀಸ್ ಸ್ಟಾರ್ ಬ್ಯಾಟರ್​ ಸ್ಮಿತ್ ಹಿಂದಿಕ್ಕಿದ್ದಾರೆ. ಇದುವರೆಗೆ ತಮ್ಮ ವೃತ್ತಿ ಜೀವನದಲ್ಲಿ ಒಟ್ಟಾರೆ ರೋಹಿತ್ ಶರ್ಮಾ 43 ಶತಕಗಳನ್ನು ಬಾರಿಸಿದ್ದಾರೆ. ಸ್ಮಿತ್​ಗಿದು ಒಟ್ಟಾರೆ 44ನೇ ಶತಕವಾಗಿದೆ. ಈ ಮೂಲಕ ಹಾಲಿ ಕ್ರಿಕೆಟಿಗರಲ್ಲಿ ಅತಿಹೆಚ್ಚು ಶತಕ ಸಿಡಿಸಿದ ನಾಲ್ಕನೇ ಬ್ಯಾಟರ್​ ಆಗಿದ್ದಾರೆ. 75 ಶತಕಗಳೊಂದಿಗೆ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ನಂತರದಲ್ಲಿ 46 ಶತಕಗಳೊಂದಿಗೆ ಜೋ ರೂಟ್, 45 ಸೆಂಚುರಿಗಳೊಂದಿಗೆ ಡೇವಿಡ್​ ವಾರ್ನರ್​ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ.

ಫ್ಯಾಬ್ 4ರಲ್ಲಿ ಅತಿ ಹೆಚ್ಚು ಟೆಸ್ಟ್ ಶತಕ: ಪ್ರಸ್ತುತ ಕಾಲದ ನಾಲ್ವರು ಅತ್ಯುತ್ತಮ ಟೆಸ್ಟ್ ಆಟಗಾರರಾದ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್ ಮತ್ತು ಜೋ ರೂಟ್ ಅವರನ್ನು ಫ್ಯಾಬ್-4 ಎಂದು ಕರೆಯಲಾಗುತ್ತದೆ. ಈ ಫ್ಯಾಬ್-4ರಲ್ಲಿ ಸ್ಟೀವ್ ಸ್ಮಿತ್ ಗರಿಷ್ಠ 32 ಟೆಸ್ಟ್ ಶತಕಗಳನ್ನು ಗಳಿಸಿದ ಬ್ಯಾಟರ್​ ಆಗಿದ್ದಾರೆ. ಇದಾದ ಬಳಿಕ 30 ಟೆಸ್ಟ್ ಶತಕ ಸಿಡಿಸಿದ ಜೋ ರೂಟ್ ಇದ್ದಾರೆ. ಕೇನ್ ವಿಲಿಯಮ್ಸನ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ತಮ್ಮ ಹೆಸರಿನಲ್ಲಿ ತಲಾ 28 ಟೆಸ್ಟ್ ಶತಕಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ:Ashes 2023: ಸತತ 100 ಟೆಸ್ಟ್ ಪಂದ್ಯ ಆಡಿದ ನಾಥನ್ ಲಿಯಾನ್; ಈ ಸಾಧನೆ ಮಾಡಿದ ಭಾರತೀಯ ಆಟಗಾರರು ಯಾರು ಗೊತ್ತೇ?

ABOUT THE AUTHOR

...view details