ಪರ್ತ್:ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೃಹತ್ ಮೊತ್ತ ದಾಖಲಿಸುವತ್ತ ಸಾಗುತ್ತಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ಮಾರ್ನಸ್ ಲ್ಯಾಬುಶೇನ್ ದ್ವಿಶತಕ ಹಾಗೂ ಮಾಜಿ ನಾಯಕ ಸ್ಟೀವ್ ಸ್ಮಿತ್ ಭರ್ಜರಿ ಶತಕ (147*) ಗಳಿಸಿ ಆಸೀಸ್ಗೆ ಮೇಲುಗೈ ಒದಗಿಸಿದ್ದಾರೆ. ಹಲವು ದಿನಗಳ ಬಳಿಕ ಮೂರಂಕಿ ಮೊತ್ತ ತಲುಪಿದ ಸ್ಮಿತ್ ಕೆಲ ದಾಖಲೆಗಳನ್ನೂ ಬರೆದಿದ್ದಾರೆ.
ಪ್ರಸ್ತುತ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬ್ಯಾಟರ್ಗಳಲ್ಲಿ ಒಬ್ಬರಾದ ಸ್ಟೀವ್ ಸ್ಮಿತ್ ಪರ್ತ್ ಟೆಸ್ಟ್ ಪಂದ್ಯದಲ್ಲಿ 29ನೇ ಶತಕ ದಾಖಲಿಸಿದ್ದಾರೆ. ಈ ಮೂಲಕ ಸ್ಮಿತ್ ಸುದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲಿ ಶತಕಗಳ ಆಸೀಸ್ನ ದಿಗ್ಗಜ ಸರ್ ಡಾನ್ ಬ್ರಾಡ್ಮನ್(29 ಶತಕ) ಅವರನ್ನು ಸರಿಗಟ್ಟಿದರು. ಅಲ್ಲದೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಮಿತ್ಗೆ ಇದು 41ನೇ ಶತಕವಾಗಿದೆ. ಸಕ್ರಿಯ ಕ್ರಿಕೆಟಿಗರಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳ ಪಟ್ಟಿಯಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ(41 ಶತಕ) ಅವರನ್ನು ಸ್ಮಿತ್ ಸರಿಗಟ್ಟಿದರು.