ಕರ್ನಾಟಕ

karnataka

ETV Bharat / sports

CPL 2021: ಡೊಮಿನಿಕ್ ಅಬ್ಬರದ ಬ್ಯಾಟಿಂಗ್​.. ಬ್ರಾವೋ ಪಡೆಗೆ ​ಚೊಚ್ಚಲ ಚಾಂಪಿಯನ್​ ಪಟ್ಟ

2021ರ ಕೆರಿಬಿಯನ್​ ಪ್ರೀಮಿಯರ್​ ಲೀಗ್ ಟೂರ್ನಿಯ​ ಫೈನಲ್​ ಪಂದ್ಯದ ಕೊನೆಯ ಎಸೆತದಲ್ಲಿ ಪೆಟ್ರಿಯಾಟ್ಸ್​​ ತಂಡವು ಗೆಲುವಿನ ದಡ ಸೇರಿದೆ. ಆಲ್​ರೌಂಡರ್​​ ಡ್ವೇನ್​ ಬ್ರಾವೋ ನಾಯಕತ್ವ ವಹಿಸಿಕೊಂಡ ಮೊದಲ ಆವೃತ್ತಿಯಲ್ಲೇ ಪೆಟ್ರಿಯಾಟ್ಸ್ ತಂಡವು ಚಾಂಪಿಯನ್​ ಪಟ್ಟಕೇರಿದೆ.

St Kitts and Nevis Patriots won their maiden Caribbean Premier League
CPL 2021: ಡೊಮಿನಿಕ್ ಅಬ್ಬರದ ಬ್ಯಾಟಿಂಗ್​... ಬ್ರಾವೋ ಪಡೆಗೆ ​ಚೊಚ್ಚಲ ಚಾಂಪಿಯನ್​ ಪಟ್ಟ

By

Published : Sep 16, 2021, 7:45 AM IST

ವೆಸ್ಟ್​ ಇಂಡೀಸ್​:ಯುವ ಆಟಗಾರ ಡೊಮಿನಿಕ್ ಡ್ರೇಕ್ಸ್ ಅಜೇಯ ಬ್ಯಾಟಿಂಗ್​ ನೆರವಿನಿಂದ ಕೆರಿಬಿಯನ್​ ಪ್ರೀಮಿಯರ್​ ಲೀಗ್​ ಫೈನಲ್​ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೆಟ್ರಿಯಾಟ್ಸ್ ಚೊಚ್ಚಲ​​ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಸೇಂಟ್ ಲೂಸಿಯಾ ಕಿಂಗ್ಸ್ ವಿರುದ್ಧ ಪೇಟ್ರಿಯಾಟ್ಸ್​​ 3 ವಿಕೆಟ್​ಗಳ ರೋಚಕ ಜಯ ದಾಖಲಿಸಿದೆ.

ಬುಧವಾರ ಬಾಸ್ಟೆರೆನಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ 160 ರನ್​ಗಳ ಗುರಿ ಬೆನ್ನಟ್ಟಿದ ಪೆಟ್ರಿಯಾಟ್ಸ್​​ ಆರಂಭಿಕ ಆಘಾತ ಅನುಭವಿಸಿತು. ಕ್ರಿಸ್​ ಗೇಲ್​ ಶೂನ್ಯ ಹಾಗೂ ಲೆವಿಸ್​ 6 ರನ್​ ಗಳಿಸಿ ಪೆವಿಲಿಯನ್​ಗೆ ಸೇರಿಕೊಂಡರು. ಬಳಿಕ ಜೊಸೌ ಸಿಲ್ವ (37) ಹಾಗೂ ರುಧರ್ಫೋರ್ಡ್​ (25) ಉತ್ತಮ ಜೊತೆಯಾಟವಾಡಿ ತಂಡಕ್ಕೆ ನೆರವಾದರು. ಇವರಿಬ್ಬರು ಔಟ್​ ಆದ ಬಳಿಕ ಬ್ರಾವೋ ಕೂಡ 8 ರನ್​ಗೆ ವಿಕೆಟ್​ ಒಪ್ಪಿಸಿದರು. ಆಗ ಪೆಟ್ರಿಯಾಟ್ಸ್​​ 95 ರನ್​ಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಆದರೆ, ಡೊಮಿನಿಕ್ ಡ್ರೇಕ್ಸ್ 24 ಎಸೆತಗಳಲ್ಲಿ 48 ರನ್ ಗಳಿಸಿ ಅಜೇಯರಾಗುಳಿದು ತಂಡಕ್ಕೆ ಗೆಲುವು ತಂದಿತ್ತರು. ಫಾಬಿಯನ್​ ಅಲೆನ್​ 20 ರನ್​ ಬಾರಿಸಿ ಡ್ರೇಕ್ಸ್​​ಗೆ ಸಾಥ್​ ನೀಡಿದರು. ಅಂತಿಮ ಓವರ್​​ನಲ್ಲಿ ಗೆಲುವಿಗೆ 9 ರನ್​ ಬೇಕಾಗಿತ್ತು. ಕೊನೆಯ ಎಸೆತದಲ್ಲಿ ಪೆಟ್ರಿಯಾಟ್ಸ್​​ ತಂಡವು ಗೆಲುವಿನ ದಡ ಸೇರಿತು. ಅಲ್ಲದೇ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡಿದ್ದ ಬ್ರಾವೋ ನೇತೃತ್ವದ ತಂಡ ಚಾಂಪಿಯನ್​ಪಟ್ಟ ಅಲಂಕರಿಸಿದೆ.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಸೇಂಟ್ ಲೂಸಿಯಾ ಕಿಂಗ್ಸ್ 7 ವಿಕೆಟ್​ ನಷ್ಟಕ್ಕೆ 159 ರನ್​ ಪೇರಿಸಿತು. ಆಲ್‌ರೌಂಡರ್‌ಗಳಾದ ರಹಕೀಮ್ ಕಾರ್ನ್‌ವಾಲ್ ಮತ್ತು ರೋಸ್ಟನ್ ಚೇಸ್ ತಲಾ 43 ರನ್​ ಬಾರಿಸಿದರು. ಇನ್ನಿಂಗ್ಸ್‌ನ ಕೊನೆಯಲ್ಲಿ ಅಬ್ಬರಿಸಿದ ಕೀಮೋ ಪಾಲ್, 21 ಎಸೆತಗಳಲ್ಲಿ ಐದು ಸಿಕ್ಸರ್‌ಗಳೊಂದಿಗೆ 39 ರನ್ ಸಿಡಿಸಿ ತಂಡವು ಸ್ಪರ್ಧಾತ್ಮಕ ಮೊತ್ತ ಗಳಿಸುವಲ್ಲಿ ನೆರವಾದರು.

ಅಂಡ್ರೆ ಪ್ಲೆಚರ್​ ನೇತೃತ್ವದ ಸೇಂಟ್ ಲೂಸಿಯಾ ಕಿಂಗ್ಸ್ ಸತತ ಎರಡನೇ ಬಾರಿಗೆ ಫೈನಲ್​ ತಲುಪಿ ಸೋಲು ಅನುಭವಿಸಿದೆ.

ಇದನ್ನೂ ಓದಿ:2017ರ ಚಾಂಪಿಯನ್ಸ್​​​​​ ಟ್ರೋಫಿ ಫೈನಲ್​ ರೀತಿ ಭಾರತವನ್ನು ಸೋಲಿಸುವೆವು: ಪಾಕ್ ಕ್ರಿಕೆಟಿಗನ ಕನಸು

ABOUT THE AUTHOR

...view details