ಕೊಲಂಬೊ (ಶ್ರೀಲಂಕಾ):ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡುವುದೆಂದರೆ 10-15 ವರ್ಷಗಳ ಹಿಂದೆಲ್ಲ ಹೆಮ್ಮೆಯ ವಿಷಯವಾಗಿತ್ತು. ಆದರೆ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಆಡಲು ಯುವ ಪ್ರತಿಭೆಗಳು ಅಷ್ಟು ಆಸಕ್ತಿ ತೋರಿಸುತ್ತಿಲ್ಲ. ಟೆಸ್ಟ್ ಕ್ರಿಕೆಟ್ ಹಳೆಯ ಛಾರ್ಮ್ ಕಳೆದುಕೊಂಡಿದೆ. ಆ್ಯಶಸ್‌ನಂತಹ ಸರಣಿಗೂ ವೀಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಪ್ರಪಂಚಾದ್ಯಂತದ ಉದಯೋನ್ಮುಖ ಕ್ರಿಕೆಟಿಗರಿಗೆ ಟೆಸ್ಟ್ ಕ್ರಿಕೆಟ್ ಇನ್ಮುಂದೆ ಅಪೇಕ್ಷಿತ ಸ್ವರೂಪವಲ್ಲ ಎಂಬ ವಿಚಾರ ಇದೀಗ ಶ್ರೀಲಂಕಾದ ವನಿಂದು ಹಸರಂಗ ನಿವೃತ್ತಿಯಿಂದ ಸಾಬೀತಾಗಿದೆ.
26 ವರ್ಷದ ಆಲ್ರೌಂಡ್ ಕ್ರಿಕೆಟರ್ ವನಿಂದು ಹಸರಂಗ ಅವರು ಟೆಸ್ಟ್ ಕ್ರಿಕೆಟ್ ವೃತ್ತಿಜೀವನಕ್ಕೆ ಇಂದು ನಿವೃತ್ತಿ ಘೋಷಿಸಿದ್ದಾರೆ. ಸೀಮಿತ ಓವರ್‌ಗಳ ಸ್ಪೆಷಲಿಸ್ಟ್ ಆಗಿ ಮಾತ್ರ ತಮ್ಮ ವೃತ್ತಿಜೀವನ ಮುಂದುವರಿಸುವುದು ಈ ನಿರ್ಧಾರದ ಹಿಂದಿನ ಕಾರಣ ಎಂದು ವನಿಂದು ತಿಳಿಸಿರುವುದಾಗಿ ಶ್ರೀಲಂಕಾ ಕ್ರಿಕೆಟ್ ಪ್ರಕಟಣೆಯಲ್ಲಿ ತಿಳಿಸಿದೆ. ಟೆಸ್ಟ್ ಆಡುವುದಿಲ್ಲ ಎಂಬ ಯುವ ಕ್ರಿಕೆಟಿಗನ ನಿರ್ಧಾರ ಟೆಸ್ಟ್ ಕ್ರಿಕೆಟ್‌ನ ಜನಪ್ರಿಯತೆ ಕುಗ್ಗುತ್ತಿರುವುದನ್ನು ಹೇಳುತ್ತಿದೆ ಅನ್ನೋದು ಪಂಡಿತರ ಮಾತು. ಇನ್ನೊಂದೆಡೆ, ವನಿಂದು ವೈಯುಕ್ತಿಕ ಕ್ರಿಕೆಟ್ ಅಂಕಿಅಂಶಗಳೂ ಇದಕ್ಕೆ ಕಾರಣ ಎಂದು ಹೇಳಬಹುದು.
ವೈಟ್ಬಾಲ್ ಕ್ರಿಕೆಟ್ನಲ್ಲಿ ಉತ್ತಮ ದಾಖಲೆ ಹೊಂದಿರುವ ಹಸರಂಗ, ಟೆಸ್ಟ್ ಕ್ರಿಕೆಟ್ನಲ್ಲಿ ಮೊನಚು ಬೌಲಿಂಗ್ ಪ್ರದರ್ಶಿಸುವಲ್ಲಿ ಎಡವಿದ್ದಾರೆ. ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿರುವ ಅವರು ಐಸಿಸಿ ಶ್ರೇಯಾಂಕದಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ನಲ್ಲಿ ಪ್ರಭಾವಿ ಬೌಲರ್ ಎನಿಸುವ ನಿರೀಕ್ಷೆ ಇದೆ.