ಕಾನ್ಪುರ: ಕತ್ತು ನೋವಿನ ಕಾರಣ ವೃದ್ಧಿಮಾನ್ ಸಹಾ ಮೊದಲ ಟೆಸ್ಟ್ 3ನೇ ದಿನ ಕಣಕ್ಕಿಳಿಯದ್ದರಿಂದ ವಿಕೆಟ್ ಕೀಪಿಂಗ್ ಮಾಡುವ ಅವಕಾಶ ಪಡೆದ ಶ್ರೀಕಾರ್ ಭರತ್ ಮೊದಲ ಪಂದ್ಯದಲ್ಲೇ ಅದ್ಭುತ ವಿಕೆಟ್ ಕೀಪಿಂಗ್ ಮಾಡಿ ಮಿಂಚಿದ್ದಾರೆ.
151 ರನ್ಗಳ ಜೊತೆಯಾಟ ನಡೆಸಿ ಭಾರತವನ್ನು 66 ಓವರ್ಗಳವರೆಗೂ ಕಾಡಿದ್ದ ಜೋಡಿಯನ್ನು ಅಶ್ವಿನ್ ಬೇರ್ಪಡಿಸಿದ್ದರು. 89 ರನ್ಗಳಿಸಿದ್ದ ವಿಲ್ ಯಂಗ್ ಅಶ್ವಿನ್ ಬೌಲಿಂಗ್ನಲ್ಲಿ ಭರತ್ ಲೋ ಕ್ಯಾಚ್ ಪಡೆದಿದ್ದರು. ಆದರೆ, ಅಂಪೈರ್ ನಿತಿನ್ ಮೆನನ್ ಔಟ್ ನೀಡಲು ನಿರಾಕರಿಸಿದರು.
ತಕ್ಷಣ ಭರತ್ ಆತ್ಮವಿಶ್ವಾಸದಿಂದ ನಾಯಕ ರಹಾನೆಯನ್ನು ಡಿಆರ್ಎಸ್ಗೆ ಮೊರೆ ಹೋಗುವಂತೆ ಸೂಚಿಸಿದರು. ಟಿವಿ ರಿಪ್ಲೇನಲ್ಲಿ ಚೆಂಡು ಬ್ಯಾಟ್ಗೆ ತಾಗಿರುವುದು ಸ್ಪಷ್ಟವಾಗಿತ್ತು. ಈ ಮೂಲಕ 67ನೇ ಓವರ್ನಲ್ಲಿ ಭಾರತ ಮೊದಲ ಬ್ರೇಕ್ ಪಡೆಯಿತು.
ಇದಲ್ಲದೆ 26 ವರ್ಷದ ವಿಕೆಟ್ ಕೀಪರ್ 95 ರನ್ಗಳಿಸಿದ್ದ ಟಾಮ್ ಲೇಥಮ್ರನ್ನು ಕೂಡ ಸ್ಟಂಪ್ ಮಾಡಿ ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಲೇಥಮ್ ಚೆಂಡನ್ನು ಮಿಸ್ ಮಾಡಿದರು. ಆದರೆ, ಸಂಪೂರ್ಣ ತಿರುವು ಪಡೆದು ಬಂದ ಚೆಂಡನ್ನು ಹಿಡಿಯುವಲ್ಲಿ ಯಶಸ್ವಿಯಾದ ಭರತ್ ತಕ್ಷಣ ಬೆಲ್ಸ್ ಹಾರಿಸಿದರು.
67 ಓವರ್ಗಳವರೆಗೂ ಭಾರತೀಯರನ್ನು ಕಾಡಿದ್ದ ಕಿವೀಸ್ ಆರಂಭಿಕರಿಬ್ಬರು ಸೇರಿದಂತೆ ಅನುಭವಿ ಬ್ಯಾಟರ್ ರಾಸ್ ಟೇಲರ್ ಕ್ಯಾಚ್ ಪಡೆಯುವುದರೊಂದಿಗೆ ನ್ಯೂಜಿಲ್ಯಾಂಡ್ 296 ರನ್ಗಳಿಗೆ ಆಲೌಟ್ ಆಗಲು ಕಾರಣವಾದರು.
ತಮ್ಮ ಮೊದಲ ಪಂದ್ಯದಲ್ಲೇ ಆಕರ್ಷಕ ಕೀಪಿಂಗ್ ಕೌಶಲ್ಯ ಪ್ರದರ್ಶನ ನೀಡಿರುವ ಶ್ರೀಕಾರ್ ಭರತ್, ನ್ಯೂಜಿಲ್ಯಾಂಡ್ ವಿರುದ್ಧ ಮುಂಬೈನಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡುವ ನಿರೀಕ್ಷೆಯಿದೆ.
ಇದನ್ನೂ ಓದಿ:IND vs NZ first test: ಕಿವೀಸ್ 296ಕ್ಕೆ ಆಲೌಟ್, 2ನೇ ಇನ್ನಿಂಗ್ಸ್ನಲ್ಲಿ ಭಾರತಕ್ಕೆ ಆರಂಭಿಕ ಆಘಾತ