ಪಲ್ಲೆಕಲೆ (ಶ್ರೀಲಂಕಾ): ಬಿ ಗ್ರೂಪ್ ತಂಡಗಳ ನಡುವೆ ನಡೆಯುತ್ತಿರುವ ಏಷ್ಯಾಕಪ್ ಸರಣಿಯ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಶ್ರೀಲಂಕಾ 5 ವಿಕೆಟ್ಗಳ ಗೆದ್ದು ಬೀಗಿದೆ. ಪಲ್ಲೆಕೆಲೆಯಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ಕೇವಲ 164 ರನ್‌ಗಳಿಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಶ್ರೀಲಂಕಾ 39 ಓವರ್ಗಳಲ್ಲಿ ಗುರಿ ತಲುಪಿ ಗೆಲುವಿನ ನಗೆ ಬೀರಿತು. ಈ ಮೂಲಕ ಹಾಲಿ ಚಾಂಪಿಯನ್ ಶ್ರೀಲಂಕಾ ಏಷ್ಯಾಕಪ್ನಲ್ಲಿ ಶುಭಾರಂಭ ಮಾಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾ 36 ರನ್ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು. ಇದರ ಬಳಿಕವೂ ನಜ್ಮುಲ್ ಹುಸೇನ್ ಶಾಂಟೊ (89) ಹೊರತುಪಡಿಸಿ ಯಾವೊಬ್ಬ ಬ್ಯಾಟರ್ ಕೂಡಾ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಉಳಿಯಲು ಸಾಧ್ಯವಾಗಲಿಲ್ಲ. ತೌಹಿದ್ ಹೃದಯ್ (20), ಮೊಹಮ್ಮದ್ ನಯೀಮ್ (16), ಮುಶ್ಫಿಕರ್ ರಹೀಮ್ (13) ರನ್ ಗಳಿಸಿದರು. ತಂಜಿದ್ ಹಸನ್ ಶೂನ್ಯ, ನಾಯಕ ಶಕೀಬ್ ಅಲ್ ಹಸನ್ (5), ಮೆಹದಿ ಹಸನ್ ಮಿರಾಜ್ (5), ಮೆಹದಿ ಹಸನ್(6), ತಸ್ಕಿನ್ ಅಹ್ಮದ್ ಮತ್ತು ಮುಸ್ತಾಫಿಜುರ್ ಶೂನ್ಯಕ್ಕೆ ಔಟಾದರು. ಶ್ರೀಲಂಕಾ ಪರ ಮತಿಶಾ ಪತಿರಾನ 4 ವಿಕೆಟ್ ಪಡೆದರೆ, ಮಹಿಷ್ ತೀಕ್ಷಣ 2 ವಿಕೆಟ್ ಪಡೆದರು. ಧನ್ಯಂಜ್ ಡಿ ಸಿಲ್ವಾ, ದುನಿತ್, ಶನಕ ತಲಾ ಒಂದು ವಿಕೆಟ್ ಪಡೆದರು.