ದುಬೈ(ಯುಎಇ):ಯಾರೂ ಸಹ ಊಹೆ ಮಾಡದ ರೀತಿಯಲ್ಲಿ ಶ್ರೀಲಂಕಾ ತಂಡ ಏಷ್ಯಾ ಕಪ್ ಪ್ರಶಸ್ತಿಗೆ ಮುತ್ತಿಕ್ಕಿದೆ. ಅಫ್ಘಾನಿಸ್ತಾನದ ವಿರುದ್ಧ ನಡೆದ ಮೊದಲ ಪಂದ್ಯ ಸೋಲುವ ಮೂಲಕ ಅಭಿಯಾನ ಆರಂಭಿಸಿದ್ದ ಶನಕ ನಾಯಕತ್ವದ ಸಿಂಹಳೀಯರ ತಂಡ ಫೈನಲ್ನಲ್ಲಿ ಬಲಿಷ್ಠ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತೀವ್ರ ಆರ್ಥಿಕ ಬಿಕ್ಕಟ್ಟು, ರಾಜಕೀಯ ಪ್ರಕ್ಷುಬ್ದತೆಯ ನಡುವೆ ಏಷ್ಯಾ ಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಶ್ರೀಲಂಕಾ 2014ರ ನಂತರ ಪ್ರತಿಷ್ಟಿತ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ಗಳಿಸಿತು. ಮೊದಲ 10 ಓವರ್ಗಳಲ್ಲಿ 58 ರನ್ ಸಂಪಾದಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡದಲ್ಲಿದ್ದ ಲಂಕಾ ತಂಡಕ್ಕೆ ರಾಜಪಕ್ಸ , ಹಸರಂಗ ಆಸರೆಯಾದರು.
ಪಾಕ್ ಬೌಲರ್ಗಳನ್ನು ಸುಲಭವಾಗಿ ದಂಡಿಸಿದ ರಾಜಪಕ್ಸ (71), ಹಸರಂಗ (36) ಜೋಡಿ ತಂಡಕ್ಕೆ ಉತ್ತಮ ರನ್ ಕಾಣಿಕೆ ನೀಡಿತು. ಹೀಗಾಗಿ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಸೇರಿಸಿತು. ಪಾಕ್ ಪರ ಹ್ಯಾರಿಸ್ ರೌಫ್ 3 ವಿಕೆಟ್, ನಸೀಂ, ಶಬ್ದಾದ್ ಖಾನ್ ಹಾಗೂ ಅಹ್ಮದ್ ತಲಾ 1 ವಿಕೆಟ್ ಪಡೆದುಕೊಂಡರು.
171 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಪ್ರಮೋದ್ ಎಸೆದ ಮೂರನೇ ಓವರ್ನಲ್ಲೇ ಎರಡು ವಿಕೆಟ್ ಕಳೆದುಕೊಂಡಿತು. ಪಾಕ್ ನಾಯಕ ಬಾಬರ್ ಅಜಂ (5), ಫಖರ್ ಜಮಾನ್ (0) ವಿಕೆಟ್ ತೆಗೆಯುವ ಮೂಲಕ ಪಾಕಿಸ್ತಾನಕ್ಕೆ ದೊಡ್ಡ ಪೆಟ್ಟು ನೀಡಿದರು. ಇದಾದ ಬಳಿಕ ಕ್ರೀಸ್‌ನಲ್ಲಿ ಒಂದಾದ ರಿಜ್ವಾನ್-ಇಫ್ತಿಕರ್ ಜೋಡಿ ಪಂದ್ಯವನ್ನು ಹತೋಟಿಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು. ಹೀಗಾಗಿ ತಂಡ 10 ಓವರ್ಗಳಲ್ಲಿ 2 ವಿಕೆಟ್ನಷ್ಟಕ್ಕೆ 68 ರನ್ಗಳಿಕೆ ಮಾಡಿತು.