ಪಲ್ಲೆಕಲ್ಲೆ: ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿದೆ. 5 ದಿನವೂ ಬ್ಯಾಟ್ಸ್ಮನ್ಗಳೇ ಪ್ರಾಬಲ್ಯ ಸಾಧಿಸಿದ್ದು, ಒಂದೂ ಇನ್ನಿಂಗ್ಸ್ನಲ್ಲೂ ಯಾವುದೇ ತಂಡವನ್ನು ಬೌಲರ್ಗಳು ಆಲೌಟ್ ಮಾಡಲು ಸಾಧ್ಯವಾಗಲಿಲ್ಲ.
ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ನಜ್ಮುಲ್ ಹುಸೇನ್ ಶಾಂಟೊ(163) ಮತ್ತು ನಾಯಕ ಮೊಮಿನುಲ್ ಹಕ್(127) ಶತಕ ಹಾಗೂ ತಮೀಮ್(90) ರಹೀಮ್(68) ಮತ್ತು ಲಿಟನ್ ದಾಸ್(50) ಅರ್ಧಶತಕಗಳ ನೆರವಿನಿಂದ 7 ವಿಕೆಟ್ ಕಳೆದುಕೊಂಡು 541 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿಕೊಂಡಿತು.
ಮೂರನೇ ದಿನ ಬ್ಯಾಟಿಂಗ್ ಆರಂಭಿಸಿದ್ದ ಅತಿಥೇಯ ಶ್ರೀಲಂಕಾ 73 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 229 ರನ್ಗಳಿಸಿತ್ತು. ನಾಲ್ಕನೇ ದಿನವೂ ಸಂಪೂರ್ಣವಾಗಿ ಬ್ಯಾಟಿಂಗ್ ನಡೆಸಿದ ಕರುಣರತ್ನೆ ಮತ್ತು ಧನಂಜಯ 4ನೇ ವಿಕೆಟ್ ಜೊತೆಯಾಟದಲ್ಲಿ ಬರೋಬ್ಬರಿ 345 ರನ್ ಸೇರಿಸಿದರು. ಕರುಣರತ್ನೆ 437 ಎಸೆತಗಳಲ್ಲಿ 26 ಬೌಂಡರಿ ಸಹಿತ 244 ರನ್ಗಳಿಸಿ 5ನೇ ದಿನ ಔಟಾದರು. ಇದು ಅವರ ಚೊಚ್ಚಲ ದ್ವಿಶತಕವಾಗಿದೆ. ಜೊತೆಗೆ ಪಲ್ಲೆಕೆಲೆ ಸ್ಟೇಡಿಯಂನಲ್ಲಿ ಮೊದಲ ಡಬಲ್ ಸೆಂಚುರಿ ಸಿಡಿಸಿದ ಶ್ರೇಯ ಕೂಡ ಅವರಿಗೆ ಸಂದಿದೆ.
ಕರುಣರತ್ನೆಗೆ ಸಾಥ್ ನೀಡಿದ ಧನಂಜಯ 166ರನ್ ಗಳಿಸಿ ಔಟಾದರು. ನಂತರ ಬಂದ ಡಿಕ್ವೆಲ್ಲಾ 31, ಹಸರಂಗ 43 ರನ್ ಗಳಿಸಿ ತಂಡದ ಮೊತ್ತವನ್ನು 600ರ ಗಡಿ ದಾಟಿಸಿದರು. ಒಟ್ಟಾರೆ ಶ್ರೀಲಂಕಾ 179 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 648 ರನ್ ಗಳಿಸಿತು.