ಐಸಿಸಿ ಕ್ರಿಕೆಟ್ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಶ್ರೀಲಂಕಾ ಸೋಲಿಲ್ಲದ ಸರದಾರನಾಗಿ ವಿಶ್ವಕಪ್ಗೆ ಪ್ರವೇಶ ಪಡೆದುಕೊಂಡಿದೆ. ಎರಡು ಪಂದ್ಯಗಳಿಗೆ ಮುನ್ನವೇ ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿತ್ತು. ಆದರೆ ಅರ್ಹತಾ ಸುತ್ತಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಎರಡು ತಂಡದ ನಡುವೆ ನಡೆಯುವ ಔಪಚಾರಿಕ ಫೈನಲ್ ಪಂದ್ಯವನ್ನೂ ಶ್ರೀಲಂಕಾ ಜಯಿಸಿದೆ.
ಹರಾರೆಯಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ 23 ಕ್ವಾಲಿಫೈಯರ್ ಫೈನಲ್‌ನಲ್ಲಿ ನೆದರ್ಲೆಂಡ್ ಅನ್ನು 128 ರನ್‌ಗಳಿಂದ ಸೋಲಿಸಿ ಶ್ರೀಲಂಕಾ ತನ್ನ ಅಜೇಯ ಓಟವನ್ನು ಮುಂದುವರೆಸಿತು. ಟಾಸ್ ಸೋತ ಶ್ರೀಲಂಕಾ ಮೊದಲು ಬ್ಯಾಟಿಂಗ್ಗೆ ಇಳಿಯಿತು. ಆರಂಭಿಕ ಜೋಡಿ ಸಾಧಾರಣ ಆರಂಭವನ್ನು ನೀಡಿತು. ಸದೀರ ಸಮರವಿಕ್ರಮ 19 ರನ್ ಗಳಿಸಿ ವಿಕೆಟ್ ಕೊಟ್ಟರು. ಅವರ ಬೆನ್ನಲ್ಲೇ ಪಥುಮ್ ನಿಸ್ಸಾಂಕ 23 ಕ್ಕೆ ಔಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಮೊದಲೆರಡು ವಿಕೆಟ್ನ್ನು ವಿಕ್ರಮ್‌ಜಿತ್ ಸಿಂಗ್ ಕಬಳಿಸಿದರು.
ಮೊದಲೆರಡು ವಿಕೆಟ್ ನಂತರ ಕುಸಾಲ್ ಮೆಂಡಿಸ್ ಮತ್ತು ಸಹನ್ ಅರಾಚ್ಚಿಗೆ ನಂತರ ಶ್ರೀಲಂಕಾಕ್ಕೆ ಆಸರೆಯಾದರು. ನಿಧಾನ ಗತಿಯಲ್ಲಿ ಬ್ಯಾಟ್ ಬೀಸಿ ವಿಕೆಟ್ ನಿಲ್ಲಿಸುವುದರ ಜೊತೆ ರನ್ನ್ನು ಕಲೆಹಾಕಿದರು. ಈ ಜೋಡಿ ಮೂರನೇ ವಿಕೆಟ್ಗೆ 72 ರನ್ ಜೊತೆಯಾಟ ಮಾಡಿತು. 52 ಬಾಲ್ನಲ್ಲಿ 1 ಸಿಕ್ಸ್ ಮತ್ತು 5 ಬೌಂಡರಿಯಿಂದ 52 ರನ್ ಮಾಡಿದ್ದ ಮೆಂಡಿಸ್ ವಿಕೆಟ್ ಕೊಟ್ಟರು. ಇದರಿಂದ ಜೊತೆಯಾಟ ಅಂತ್ಯವಾಯಿತು. 25 ಓವರ್ ವೇಳೆಗೆ ಶ್ರೀಲಂಕಾ 3 ವಿಕೆಟ್ ನಷ್ಟಕ್ಕೆ 124ರನ್ ಕಲೆಹಾಕಿತ್ತು.
ಮೆಂಡಿಸ್ ವಿಕೆಟ್ ನಂತರ ಚರಿತ್ ಅಸಲಂಕಾ ಕ್ರೀಸ್‌ನಲ್ಲಿ ಸೇರಿ ಶ್ರೀಲಂಕಾಕ್ಕೆ ಮತ್ತೊಂದು ಪ್ರಮುಖ ಪಾಲುದಾರಿಕೆಯನ್ನು ಸ್ಥಾಪಿಸಿದರು. ಆದರೆ ಅದನ್ನು ದೊಡ್ಡದಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಜುಲ್ಫಿಕರ್ ಮತ್ತೊಮ್ಮೆ 57 ರನ್ ಗಳಿಸಿ ಅರಾಚ್ಚಿಗೆಯನ್ನು ಔಟ್ ಮಾಡಿದರು. ಅಸಲಂಕಾ ಮತ್ತು ಅರಾಚ್ಚಿಗೆ ಜೋಡಿಯು 64 ರನ್ ಪಾಲುದಾರಿಕೆ ಮಾಡಿದ್ದರು. ಈ ವಿಕೆಟ್ ನಂತರ ಲಂಕಾ ತನ್ನ ಬಲವನ್ನು ಕಳೆದುಕೊಂಡಿತು. ಜುಲ್ಫಿಕರ್ ಓವರ್ನಲ್ಲಿ 36ರನ್ ಗಳಿಸಿದ್ದ ಅಸಲಂಕಾ ಸಹ ವಿಕೆಟ್ ಕೊಟ್ಟರು. ಅವರ ಬೆನ್ನಲ್ಲೇ ಶ್ರೀಲಂಕಾ ನಾಯಕ ದಸುನ್ ಶನಕಾ ಮತ್ತು ಧನಂಜಯ ಡಿ ಸಿಲ್ವಾ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು.
ಕೊನೆಯಲ್ಲಿ ಹಸರಂಗ ಮತ್ತು ತೀಕ್ಷ್ಣ ಲಂಕಾಗೆ 40 ರನ್ ಸೇರಿಸಿದರು. ನೆದರ್ಲ್ಯಾಂಡ್ ಉತ್ತಮ ಬೌಲಿಂಗ್ನಿಂದ ಶ್ರೀಲಂಕಾ 47.5 ಓವರ್‌ಗಳಲ್ಲಿ 233 ರನ್‌ಗಳಿಗೆ ಆಲೌಟ್ ಆಯಿತು. ನೆದರ್ಲ್ಯಾಂಡ್ನ ನಾಲ್ವರು ಬೌಲರ್ಗಳು ಎರಡೆರಡು ವಿಕೆಟ್ ಪಡೆದು ಮಿಂಚಿದರು.
ಪ್ರತ್ಯುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ನೆದರ್ಲೆಂಡ್ಸ್ 25 ರನ್ ಜೊತೆಯಾಟದ ಉತ್ತಮ ಆರಂಭವನ್ನು ಪಡೆಯಿತು. 13 ರನ್ ಗಳಿಸಿ ವಿಕ್ರಮಜಿತ್ ವಿಕೆಟ್ ಕೊಟ್ಟರು. ಮಧುಶಂಕಾ ಅವರ ಪರಿಣಾಮಕಾರಿ ಬೌಲಿಂಗ್ನಿಂದ ಮೇಲಿನ ಕ್ರಮಾಂಕದ ಮೂವರು ಬ್ಯಾಟರ್ಗಳು ವಿಕೆಟ್ ಕೊಟ್ಟರು. ನಂತರ ಕೆಳ ಕ್ರಮಾಂಕದ ಮೇಲೆ ವನಿಂದು ಹಸರಂಗ ಪ್ರಬಲ ದಾಳಿಯನ್ನು ನಡೆಸಿದರು. ಅವರ ಸ್ಪಿನ್ಗೆ ನಾಲ್ಕು ವಿಕೆಟ್ಗಳು ಉರುಳಿದವು. ಇದರಿಂದ ನೆದರ್ಲ್ಯಾಂಡ್ 23.3 ಓವರ್ನಲ್ಲಿ 105ಗೆ ಆಲ್ಔಟ್ ಆಯಿತು.
ಇದನ್ನೂ ಓದಿ:BANW vs INDW: ಹರ್ಮನ್ಪ್ರೀತ್ ಅರ್ಧಶತಕ.. ಮೊದಲ ಟಿ20ಯಲ್ಲಿ ಬಾಂಗ್ಲಾ ವನಿತೆಯರನ್ನು ಮಣಿಸಿದ ಭಾರತ