ಕೊಲಂಬೊ(ಶ್ರೀಲಂಕಾ): ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಶ್ರೀಲಂಕಾ ಇನ್ನಿಲ್ಲದ ತೊಂದರೆಗೊಳಗಾಗಿದ್ದು, ಅಲ್ಲಿನ ಜನರಿಗೆ ತಿನ್ನಲು ಒಂದು ಹೊತ್ತಿನ ಊಟ ಸಹ ಲಭ್ಯವಾಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸಾಲದ ಸುಳಿಯಲ್ಲಿ ಸಿಲುಕಿ ಒಂದಾಡುತ್ತಿರುವ ದ್ವೀಪ ರಾಷ್ಟ್ರದ ಮುಂದಿನ ಗತಿಯೇನು ಎಂಬ ಪ್ರಶ್ನೆ ಉದ್ಭವವಾಗಿದೆ. ಇದರ ಮಧ್ಯೆ ಆಗಸ್ಟ್ ತಿಂಗಳಲ್ಲಿ ಮಹತ್ವದ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಕೂಡ ಇಲ್ಲಿ ಆಯೋಜನೆಗೊಂಡಿದೆ.
ಆರ್ಥಿಕ ಸಂಕಷ್ಟದ ನಡುವೆ ಆಗಸ್ಟ್ 24ರಿಂದ ಸೆಪ್ಟೆಂಬರ್ 7ರವರೆಗೆ ಶ್ರೀಲಂಕಾದಲ್ಲಿ ಏಷ್ಯಾಕಪ್ ಟೂರ್ನಿ ನಡೆಯುವುದು ಖಚಿತವಾಗಿದೆ. ಕ್ರಿಕೆಟ್ ಟೂರ್ನಿ ನಡೆಸಲು ತಾವು ಉತ್ಸುಕರಾಗಿದ್ದು, ಅದಕ್ಕಾಗಿ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಾಹಿತಿ ಹಂಚಿಕೊಂಡಿದೆ. ಟೂರ್ನಿ ನಡೆಸಲು ಶ್ರೀಲಂಕಾ ಆತಿಥ್ಯ ವಹಿಸಿರುವ ಕಾರಣ, ಆರ್ಥಿಕ ಬಿಕ್ಕಟ್ಟಿನ ನಡುವೆ ಇದು ಸಂಭವಿಸಬಹುದೇ? ಎಂಬ ಪ್ರಶ್ನೆಗಳು ಉದ್ಭವವಾಗಿವೆ.
ಶ್ರೀಲಂಕಾ ಕ್ರಿಕೆಟ್ ಬೋರ್ಡ್ನ ಅಧಿಕಾರಿಗಳು ಮತ್ತು ಎಸಿಸಿ ಅಧ್ಯಕ್ಷರು ಅಹಮದಾಬಾದ್ನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದ ವೇಳೆ ಭೇಟಿಯಾಗಿದ್ದು, ಈ ವೇಳೆ ಏಷ್ಯಾಕಪ್ ಆಯೋಜನೆ ಕುರಿತಾಗಿ ಎಲ್ಲ ರೀತಿಯ ಮಾತುಕತೆ ನಡೆದಿದೆ. ಟೂರ್ನಿ ಆಯೋಜನೆ ಮಾಡಲು ನಾವು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ ಎಂದು ಲಂಕಾ ಕ್ರಿಕೆಟ್ ಬೋರ್ಡ್ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.