ಲಖನೌ:ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಟಿ-20 ಸರಣಿ ಇಂದು ಆರಂಭಗೊಳ್ಳಲಿದೆ. ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಮೊದಲ ಟಿ-20 ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಬಲಿಷ್ಠ ಭಾರತವನ್ನು ಶ್ರೀಲಂಕಾ ತಂಡ ಎದುರಿಸಲಿದೆ.
ಕಳೆದ ಬಾರಿಯ ಶ್ರೀಲಂಕಾ ಪ್ರವಾಸದ ವೇಳೆ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡ 2 ಟಿ-20 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಉಭಯ ದೇಶಗಳ ಮಧ್ಯೆ ನಡೆದ 14 ಪಂದ್ಯಗಳಲ್ಲಿ ಭಾರತ 11 ರಲ್ಲಿ ಗೆದ್ದಿದ್ದರೆ, ಲಂಕಾ 2 ರಲ್ಲಿ ವಿಜಯ ಸಾಧಿಸಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ. ಇದು ಲಂಕಾ ವಿರುದ್ಧ ಭಾರತ ಟಿ-20ಯಲ್ಲಿ ಪ್ರಾಬಲ್ಯ ಸಾಧಿಸಿದ್ದನ್ನು ತೋರಿಸುತ್ತದೆ.
ಭಾರತದ ಪರ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ, ವಿಕೆಟ್ ಕೀಪರ್ ರಿಷಬ್ ಪಂತ್, ಶಾರ್ದೂಲ್ ಠಾಕೂರ್ಗೆ ವಿಶ್ರಾಂತಿ ನೀಡಲಾಗಿದ್ದರೆ, ಸೂರ್ಯಕುಮಾರ್ ಯಾದವ್, ದೀಪಕ್ ಚಹರ್ ಗಾಯಗೊಂಡ ಸರಣಿಯಿಂದ ಹೊರಬಿದ್ದಿದ್ದಾರೆ.
ಲಂಕಾಗೆ ಗಾಯದ ಸಮಸ್ಯೆ:ಶ್ರೀಲಂಕಾ ತಂಡದ ಸ್ಟಾರ್ ಸ್ಪಿನ್ನರ್ ವಾನಿಂದು ಹಸರಂಗ ಕೊರೊನಾಗೆ ತುತ್ತಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಇದಲ್ಲದೇ, ಕುಶಾಲ್ ಮೆಂಡಿಸ್, ಕುಶಾಲ್ ಪೆರೇರಾ, ಅವಿಷ್ಕಾ ಫೆರ್ನಾಂಡೋ ಗಾಯಗೊಂಡಿದ್ದು, ತಂಡದ ಬಲ ಕುಗ್ಗಿಸಿದೆ.
ವೆಸ್ಟ್ ಇಂಡೀಸ್ ವಿರುದ್ಧ ನಡೆದ ಸರಣಿಯನ್ನು ಕ್ಲೀನ್ಸ್ವೀಪ್ ಮಾಡಿರುವ ಭಾರತಕ್ಕೆ ಶ್ರೀಲಂಕಾ ವಿರುದ್ಧದ ಟೂರ್ನಿಯನ್ನು ಜಯಿಸುವ ಹುಮ್ಮಸ್ಸಿನಲ್ಲಿದೆ. ಗಾಯಗೊಂಡಿರುವ ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಚಹರ್ ಸ್ಥಾನಕ್ಕೆ ಬದಲಿ ಆಟಗಾರರನ್ನು ಆಯ್ಕೆ ಮಾಡಲಾಗಿಲ್ಲ.