ನವದೆಹಲಿ: ಶಿಖರ್ ಧವನ್ ನೇತೃತ್ವದ ಭಾರತ ತಂಡಕ್ಕೆ ಆತಿಥ್ಯವಹಿಸಿದ್ದ ಶ್ರೀಲಂಕಾ ಕ್ರಿಕೆಟ್ ಮಂಡಳಿ 3 ಟಿ-20 ಮತ್ತು 3 ಏಕದಿನ ಕ್ರಿಕೆಟ್ ಪಂದ್ಯಗಳಿಂದ 100 ಕೋಟಿ ರೂಗಳಿಗಿಂತಲೂ ಹೆಚ್ಚಿನ ಹಣ ಗಳಿಸಿಕೊಂಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಕ್ರಿಕೆಟ್ ಲೋಕದ ಶ್ರೀಮಂತ ಮಂಡಳಿಯಾಗಿರುವ ಭಾರತದ ವಿರುದ್ಧ ಸರಣಿಯನ್ನಾಡಲೂ ಇಡೀ ವಿಶ್ವದ ಕ್ರಿಕೆಟ್ ಬೋರ್ಡ್ಗಳು ಸದಾ ಕಾಯುತ್ತಿರುತ್ತವೆ. ಆರ್ಥಿಕ ಸಂಕಷ್ಟದಲ್ಲಿದ್ದ ಶ್ರೀಲಂಕಾ ಮಂಡಳಿಯ ಕೋರಿಕೆಯ ಮೇರೆಗೆ ಬಿಸಿಸಿಐ ಈ ದಿಗ್ಗಜರಿಲ್ಲದ ದ್ವಿತೀಯ ದರ್ಜೆ ತಂಡವನ್ನು ಶ್ರೀಲಂಕಾ ಪ್ರವಾಸಕ್ಕೆ ಕಳುಹಿಸಿತ್ತು.
ಯುವಕರು ಹಾಗೂ ಹೊಸ ಮುಖಗಳೇ ಇದ್ದ ಈ ಸರಣಿಯಲ್ಲೂ ಶ್ರೀಲಂಕಾ ಕ್ರಿಕೆಟ್ ಮಂಡಳಿ ಬರೋಬ್ಬರಿ 107 ಕೋಟಿ ರೂ ಆದಾಯ ಸಂಪಾದಿಸಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಮೋಹನ್ ಡಿ ಸಿಲ್ವಾ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಮೂಲಕ ಬಿಸಿಸಿಐ ಏಕೆ ಕ್ರಿಕೆಟ್ ಜಗತ್ತಿನಲ್ಲಿ ಪ್ರಬಲ ಶಕ್ತಿಯುತ ಬೋರ್ಡ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.