ಕೊಲಂಬೊ(ಶ್ರೀಲಂಕಾ):ಸತತ ವೈಫಲ್ಯದಿಂದ ಟೀಕೆಗೆ ಗುರಿಯಾಗಿರುವ ಶ್ರೀಲಂಕಾ ತಂಡಕ್ಕೆ ಹೊಸ ನಾಯಕರ ನೇಮಕ ಮಾಡಲಾಗಿದೆ. ಮೂರು ಮಾದರಿಯ ಕ್ರಿಕೆಟ್ಗೆ ಪ್ರತ್ಯೇಕ ನಾಯಕರನ್ನು ಆಯ್ಕೆ ಮಾಡಲಾಗಿದೆ. ಟೆಸ್ಟ್ ತಂಡಕ್ಕೆ ಬ್ಯಾಟರ್ ಧನಂಜಯ್ ಡಿ ಸಿಲ್ವಾ, ಏಕದಿನಕ್ಕೆ ಕುಸಾಲ್ ಮೆಂಡಿಸ್, ಟಿ20 ಮಾದರಿಗೆ ವನಿಂದು ಹಸರಂಗ ನಾಯಕರಾಗಿ ಇರಲಿದ್ದಾರೆ ಎಂದು ಆಯ್ಕೆ ಸಮಿತಿಯ ನೂತನ ಅಧ್ಯಕ್ಷ ಉಪುಲ್ ತರಂಗ ಘೋಷಿಸಿದ್ದಾರೆ.
ಭಾರತದಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಲಂಕಾ ತಂಡದ ಕಳಪೆ ಪ್ರದರ್ಶನದಿಂದಾಗಿ ಎರಡು ಪಂದ್ಯಗಳಲ್ಲಿ ಮಾತ್ರ ಗೆದ್ದು, ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿತ್ತು. ಹೀಗಾಗಿ ಫೀಲ್ಡಿಂಗ್, ಬ್ಯಾಟಿಂಗ್, ಬೌಲಿಂಗ್ನಲ್ಲಿ ತಂಡವನ್ನು ಮರುರಚಿಸಬೇಕಿದೆ ಎಂದು ಲಂಕಾ ಮಂಡಳಿ ಹೇಳಿದೆ.
ತಂಡ ಕಟ್ಟಲು ಪ್ರತ್ಯೇಕ ನಾಯಕತ್ವ:ಶ್ರೀಲಂಕಾ ಟೆಸ್ಟ್ ಕ್ರಿಕೆಟ್ ತಂಡದ ಹೊಸ ನಾಯಕನಾಗಿ ಧನಂಜಯ ಡಿ ಸಿಲ್ವಾ ಅವರನ್ನು ನೇಮಕ ಮಾಡಲಾಗಿದೆ. ಮೂರು ಸ್ವರೂಪಗಳಿಗೆ ಪ್ರತ್ಯೇಕ ನಾಯಕರ ಆಯ್ಕೆ ಮೊದಲು ಇರಲಿಲ್ಲ. ಆದರೆ, ಬ್ಯಾಟಿಂಗ್, ಬೌಲಿಂಗ್ ವಿಭಾಗವನ್ನು ಬಲಪಡಿಸಿ, ತಂಡವನ್ನು ಕಟ್ಟಲು ಪ್ರತ್ಯೇಕ ನಾಯಕರನ್ನು ಆಯ್ಕೆ ಮಾಡಲಾಗಿದೆ. ಏಕದಿನಕ್ಕೆ ಕುಸಾಲ್ ಮೆಂಡಿಸ್ ಮತ್ತು ವನಿಂದು ಹಸರಂಗ ಟಿ20 ಸ್ವರೂಪಕ್ಕೆ ನಾಯಕರಾಗಿ ಇರಲಿದ್ದಾರೆ. ಹಸರಂಗವನ್ನು ದೀರ್ಘಾವಧಿಯ ಆಯ್ಕೆಯಾಗಿ ಪರಿಗಣಿಸಲಾಗಿದೆ ಎಂದು ಉಪುಲ್ ತರಂಗ ಹೇಳಿದರು.