ಗಾಲೆ: ಆತಿಥೇಯ ಶ್ರೀಲಂಕಾ ತಂಡ ಸ್ಪಿನ್ ಬೌಲರ್ಗಳ ಅದ್ಭುತ ದಾಳಿಯ ನೆರವಿನಿಂದ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು 187 ರನ್ಗಳಿಂದ ಗೆದ್ದು ಬೀಗಿದೆ.
ಎರಡನೇ ಇನ್ನಿಂಗ್ಸ್ನಲ್ಲಿ 191/4 ರನ್ಗಳಿಗೆ ಡಿಕ್ಲೇರ್ ಘೋಷಿಸಿಕೊಂಡಿದ್ದ ಶ್ರೀಲಂಕಾ, ವಿಂಡೀಸ್ಗೆ 348 ರನ್ಗಳ ಟಾರ್ಗೆಟ್ ನೀಡಿತ್ತು. ಬೃಹತ್ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ 4ನೇ ದಿನ ಕೇವಲ 18 ರನ್ ಗಳಾಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತ್ತು. ಈ ಮೂಲಕ ಹೀನಾಯ ಸೋಲು ಕಾಣುವ ಸ್ಥಿತಿಗೆ ತಲುಪಿತ್ತು.
ಆದರೆ, ಎಂಕ್ರುಮಾ ಬಾನರ್ (68) ಮತ್ತು ಜೋಶುವಾ ಡಿ ಸಿಲ್ವಾ (54) 7ನೇ ವಿಕೆಟ್ಗೆ 100 ರನ್ ಸೇರಿಸಿ ಲಂಕಾ ಬೌಲರ್ಗಳಿಗೆ ಸ್ವಲ್ಪ ಸಮಯ ಪ್ರತಿರೋಧ ತೋರಿದರು. ಆದರೆ ಅಂತಿಮ ದಿನವಾದ ಇಂದು ಸ್ಪಿನ್ನರ್ ಎಂಬುಲ್ದೇನಿಯಾ, ಸಿಲ್ವಾರ ವಿಕೆಟ್ ಪಡೆದು ಶ್ರೀಲಂಕಾ ಗೆಲುವನ್ನು ಆರಂಭದ ಸೆಷನ್ನಲ್ಲೇ ಖಚಿತಪಡಿಸಿದರು. ವಿಂಡೀಸ್ ತನ್ನ 2ನೇ ಇನ್ನಿಂಗ್ಸ್ನಲ್ಲಿ 160 ರನ್ಗಳಿಗೆ ಸರ್ವಪತನ ಕಂಡು 187 ರನ್ಗಳ ಸೋಲನುಭವಿಸಿತು.