ಕೊಲಂಬೊ: ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ತಂಡ 2ನೇ ಟಿ20 ಪಂದ್ಯದಲ್ಲಿ ಕೇವಲ 133 ರನ್ಗಳ ಸಾಧಾರಣ ಗುರಿ ನೀಡಿಯೂ ಬೌಲರ್ಗಳ ಚಾಣಕ್ಷ್ಯ ಪ್ರದರ್ಶನದ ನೆರವಿನಿಂದ ಕೊನೆಯ ಓವರ್ ವರೆಗೂ ಪಂದ್ಯವನ್ನು ತೆಗೆದುಕೊಂಡು ಹೋಗಿ 4 ವಿಕೆಟ್ಗಳ ರೋಚಕ ಸೋಲು ಕಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅನಾನುಭವಿಗಳ ಭಾರತ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕೇವಲ 132 ರನ್ಗಳಿಸಲಷ್ಟೇ ಶಕ್ತವಾಯಿತು.
ನಾಯಕ ಶಿಖರ್ ಧವನ್ 42 ಎಸೆತಗಳನ್ನೆದುರಿಸಿ 5 ಬೌಂಡರಿ ಸಹಿತ 40 ರನ್ಗಳಿಸಿದರೆ, ಪದಾರ್ಪಣೆ ಮಾಡಿದ್ದ ರುತುರಾಜ್ ಗಾಯಕ್ವಾಡ್18 ಎಸೆತಗಳಲ್ಲಿ 21, ದೇವದತ್ ಪಡಿಕ್ಕಲ್ 23 ಎಸೆತಗಳಲ್ಲಿ 29 ರನ್ಗಳಿಸಿದರು.
ಕೊರೊನಾ ಸೋಂಕಿತ ಕೃನಾಲ್ ಪಾಂಡ್ಯ ಜೊತೆ ಸಂಪರ್ಕದಲ್ಲಿದ್ದ ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಚಹಲ್, ದೀಪಕ್ ಚಹರ್, ಮನೀಶ್ ಪಾಂಡೆ, ಇಶಾನ್ ಕಿಶನ್ ಈ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಹಾಗಾಗಿ ಅನನುಭವಿಗಳ ತಂಡ ಶ್ರೀಲಂಕಾ ಬೌಲರ್ಗಳ ಎದುರು ರನ್ಗಳಿಸಲು ಪರದಾಟಿತು.
ಶ್ರೀಲಂಕಾ ಪರ ಧನಂಜಯ 29ಕ್ಕೆ 2, ಶನಕ 14ಕ್ಕೆ 1, ಚಮೀರಾ 23ಕ್ಕೆ 1 ವಿಕೆಟ್ ಪಡೆದು ಭಾರತೀಯರ ರನ್ಗತಿಗೆ ಕಡಿವಾಣವಾಕಿದರು.
ಇನ್ನು 133 ರನ್ಗಳ ಸಾಧಾರಣ ಗುರಿ ಪಡೆದ ಶ್ರೀಲಂಕಾ ಕೂಡ ಚೇಸಿಂಗ್ ವೇಳೆ ರನ್ಗಳಿಸಲು ಪರದಾಡಿ 6 ವಿಕೆಟ್ ಕಳೆದುಕೊಂಡಿತ್ತು. ಆದರೆ ಧನಂಜಯ ಡಿ ಸಿಲ್ವಾ ಕೊನೆಯ ಓವರ್ವರೆಗೂ ಬ್ಯಾಟಿಂಗ್ ನಡೆಸಿ ಅಜೇಯ 40 ರನ್ಗಳಿಸುವ ಮೂಲಕ ಇನ್ನು 2 ಎಸೆತಗಳಿರುವಂತೆಯೇ 4 ವಿಕೆಟ್ಗಳ ರೋಚಕ ಜಯಕ್ಕೆ ಕಾರಣರಾದರು.
ಇವರಿಗೆ ಸಾಥ್ ನೀಡಿದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮಿನೋದ್ ಭನುಕ 31 ಎಸೆತಗಳಲ್ಲಿ 36, ಹಸರಂಗ 15 ರನ್ಗಳಿಸಿದರು. ಕೊನೆಯಲ್ಲಿ ಕೇವಲ 6 ಎಸೆತಗಳಲ್ಲಿ ಅಜೇಯ 12 ರನ್ಗಳಿಸಿದ ಚಮಿಕ ಕರುಣರತ್ನೆ ಧನಂಜಯ ಜೊತೆಗೂಡಿ ಭಾರತದ ಕೈಯಲ್ಲಿದ್ದ ಗೆಲುವನ್ನು ಕಸಿದುಕೊಂಡರು.
ಭಾರತದ ಪರ ಕುಲದೀಪ್ ಯಾದವ್ 30ಕ್ಕೆ 2, ರಾಹುಲ್ ಚಹರ್ 27ಕ್ಕೆ1, ವರುಣ್ ಚಕ್ರವರ್ತಿ 18ಕ್ಕೆ 1, ಸಕಾರಿಯಾ 34 ರನ್ಗಳಿಗೆ2 ಮತ್ತು ಭುವನೇಶ್ವರ್ ಕುಮಾರ್ 21ಕ್ಕೆ1 ವಿಕೆಟ್ ಪಡೆದರಾದರು. ಆದರೆ ಕಡಿಮೆ ಗುರಿ ನೀಡಿದ್ದರಿಂದ ಬೌಲರ್ಗಳ ನಡೆಸಿದ ಹೋರಾಟ ವ್ಯರ್ಥವಾಯಿತು.
ಇದನ್ನು ಓದಿ:ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದರೆ 3 ಕೋಟಿ ರೂ. ಬಹುಮಾನ: ಭಾರತೀಯ ರೈಲ್ವೆ