ಗಾಲೆ:ವೆಸ್ಟ್ ಇಂಡೀಸ್ (West Indies) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ ಆಲ್ರೌಂಡರ್ ಧನಂಜಯ ಡಿ ಸಿಲ್ವಾ (Dhananjaya de Silva) ವಿಚಿತ್ರವಾಗಿ ಔಟಾಗುವ ಮೂಲಕ ನಗೆಪಾಟಲಿಗೆ ಪಾತ್ರರಾಗಿದ್ದಾರೆ.
ಮೊದಲ ಟೆಸ್ಟ್ ಎರಡನೇ ದಿನ ಧನಂಜಯ ಡಿ ಸಿಲ್ವಾ ದಿನದ 5ನೇ ಓವರ್ನಲ್ಲಿ ಹಿಟ್ ವಿಕೆಟ್ (Hit wicket) ಆದರು. ಶನ್ನಾನ್ ಗೇಬ್ರಿಯಲ್ ಎಸೆದ 95ನೇ ಓವರ್ನ 4ನೇ ಎಸೆತದಲ್ಲಿ ಚೆಂಡು ಬ್ಯಾಟ್ ತಾಗಿ ನೆಲಕ್ಕೆ ಬಡಿದು ಚಿಮ್ಮಿತು. ಆ ಚೆಂಡು ವಿಕೆಟ್ಗೆ ತಗುಲಬಹುದೆಂದು ತಡೆಯುವ ಬರದಲ್ಲಿ ಸ್ವತಃ ಬ್ಯಾಟ್ನಿಂದಲೇ ಸ್ಟಂಪ್ಗಳಿಗೆ ಅಪ್ಪಳಿಸಿದರು. ತಮ್ಮ ಈ ಆತುರದ ನಿರ್ಧಾರದಿಂದ ವಿಕೆಟ್ ಒಪ್ಪಿಸಿದ್ದಕ್ಕೆ ನಾಚಿಕೆಯಿಂದ ಮುಖ ಮುಚ್ಚಿಕೊಂಡು ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು.
ಸಿಲ್ವಾ ಔಟಾಗುವ ಮುನ್ನ ನಾಯಕ ಕರುಣರತ್ನೆ (145) ಜೊತೆಗೆ 4ನೇ ವಿಕೆಟ್ಗೆ 121 ರನ್ಗಳ ಜೊತೆಯಾಟ ನಡೆಸಿದ್ದರು. 95 ಎಸೆತಗಳನ್ನೆದುರಿಸಿದ್ದ ಅವರು 61 ರನ್ಗಳಿಸಿ ತಮ್ಮದೇ ಎಡವಟ್ಟಿನಿಂದ ಎದುರಾಳಿಗೆ ತಮ್ಮ ವಿಕೆಟ್ ಅನ್ನು ಉಡುಗೊರೆಯಾಗಿ ನೀಡಿದರು.
ಆದರೂ ಶ್ರೀಲಂಕಾ 133.5 ಓವರ್ಗಳಲ್ಲಿ 386 ರನ್ಗಳಿಸಿ ಆಲೌಟ್ ಆಯಿತು. ಪತುಮ್ ನಿಸಾಂಕ 56, ಕರುಣರತ್ನೆ 147, ಡಿ ಸಿಲ್ವಾ 61, ಚಂಡಿಮಾಲ್ 45 ರನ್ಗಳಿಸಿದರು.