ಕರ್ನಾಟಕ

karnataka

ETV Bharat / sports

ಏಷ್ಯಾಕಪ್‌ನಲ್ಲಿ ನಾಳೆ: ಪ್ರಮುಖ ಆಟಗಾರರ ಅಲಭ್ಯತೆಯ ನಡುವೆ ಬಾಂಗ್ಲಾ vs ಲಂಕಾ ಪೈಪೋಟಿ - Sri Lanka

Asia Cup 2nd match between Sri Lanka vs Bangladesh: ಏಷ್ಯಾಕಪ್‌ನ​ ಎರಡನೇ ಪಂದ್ಯದಲ್ಲಿ ನಾಳೆ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ.

ಏಷ್ಯಾಕಪ್
ಏಷ್ಯಾಕಪ್

By ETV Bharat Karnataka Team

Published : Aug 30, 2023, 8:22 PM IST

ಪಲ್ಲೆಕೆಲೆ (ಶ್ರೀಲಂಕಾ): ಏಷ್ಯಾಕಪ್​ನ ಎರಡನೇ ಪಂದ್ಯದಲ್ಲಿ ನಾಳೆ (ಗುರುವಾರ) ಬಿ ಗುಂಪಿನಲ್ಲಿರುವ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿ ಆಗುತ್ತಿವೆ. ಕಳೆದ ಟಿ20 ಮಾದರಿಯ ಏಷ್ಯಾಕಪ್‌ ವಿಜೇತ ಸಿಂಹಳೀಯರು ಈ ವರ್ಷ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಇದರಿಂದ ಅನುಭವಿ ಆಟಗಾರರ ಕೊರತೆ ಎದುರಾಗಿದೆ.

ಶ್ರೀಲಂಕಾ ಕ್ರಿಕೆಟ್​ ಮಂಡಳಿ ನಿನ್ನೆಯವರೆಗೆ ಆಟಗಾರರ ಫಿಟ್​​ನೆಸ್​ ವರದಿಗಾಗಿ ಕಾದು ತಂಡ ಪ್ರಕಟಿಸಿತು. ವನಿಂದು ಹಸರಂಗಾ, ದುಷ್ಮಂತ ಚಮೀರಾ, ಲಹಿರು ಕುಮಾರ ಮತ್ತು ದಿಲ್ಶಾನ್ ಮಧುಶಂಕ ಗಾಯದ ಸಮಸ್ಯೆಯಿಂದಾಗಿ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ. 2021ರಲ್ಲಿ ಕೊನೆಯ ಬಾರಿಗೆ ಏಕದಿನ ಆಡಿದ್ದ ಕುಸಲ್​ ಪೆರೆರಾರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ, ಪೆರೆರಾ ಇನ್ನೂ ಕೋವಿಡ್​ನಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೀಗಾಗಿ, ನಾಳಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಸಿಂಹಳೀಯರು ಭಾರತದ ವಿರುದ್ಧದ ಏಕದಿನ ಸರಣಿ (0-3) ಮತ್ತು ನ್ಯೂಜಿಲೆಂಡ್​ ಎದುರು (0-2) ವೈಟ್​ ವಾಶ್​ ಅನುಭವಿಸಿದ್ದಾರೆ. ಹರಾರೆಯಲ್ಲಿ ನಡೆದ ಐಸಿಸಿ ವಿಶ್ವಕಪ್​​ನ ಕ್ವಾಲಿಫೈಯರ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅದೇ ಹುಮ್ಮಸ್ಸಿನಲ್ಲಿ ಶ್ರೀಲಂಕಾ ನಾಳೆ ಏಷ್ಯಾಕಪ್‌ನಲ್ಲಿ ಮೈದಾನಕ್ಕಿಳಿಯಬೇಕಿದೆ. ಬಾಂಗ್ಲಾದೇಶಕ್ಕೆ ಸವಾಲೆಸೆಯಲು ಪಾಥುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ ಮತ್ತು ಚರಿತ್ ಅಸಲಂಕಾ ರನ್​ ಕಲೆಹಾಕುವ ಅಗತ್ಯವಿದೆ. ಭಾರತದ ವಿರುದ್ಧ ಶತಕ ಸಿಡಿಸಿದ್ದು ಬಿಟ್ಟರೆ ಇಡೀ ವರ್ಷ ಸಿಡಿದೇಳದ ನಾಯಕ ದಸುನ್ ಶನಕ ಬಾಂಗ್ಲಾ ವಿರುದ್ಧ ಫಾರ್ಮ್​ಗೆ ಮರಳಲೇಬೇಕಿದೆ. ಬೌಲಿಂಗ್​ನಲ್ಲಿ ಸ್ಪಿನ್ನರ್ ಮಹೇಶ್ ತೀಕ್ಷಣ ಮತ್ತು ವೇಗಿ ಕಸುನ್ ರಜಿತ ಮುಂಚೂಣಿಯಲ್ಲಿದ್ದು, ಯುವ ಬೌಲರ್​ಗಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವ ಜವಾಬ್ದಾರಿ ಹೊಂದಿದ್ದಾರೆ.

ಬಾಂಗ್ಲಾ ತಂಡಕ್ಕೂ ಗಾಯದ ತಲೆನೋವು: ಬಾಂಗ್ಲಾದ ತಮೀಮ್ ಇಕ್ಬಾಲ್, ವೇಗಿ ಎಬಾಡೋಟ್ ಹೊಸೈನ್ ಮತ್ತು ವಿಕೆಟ್ ಕೀಪರ್-ಬ್ಯಾಟರ್ ಲಿಟ್ಟನ್ ದಾಸ್ ಏಷ್ಯಾಕಪ್​ನಲ್ಲಿ ಗಾಯದ ಕಾರಣದಿಂದ ಹೊರಗುಳಿದಿದ್ದಾರೆ. ದಾಸ್ ಬದಲಿಗೆ 30 ವರ್ಷದ ವಿಕೆಟ್ ಕೀಪರ್ ಬ್ಯಾಟರ್ ಅನಾಮುಲ್ ಹಕ್ ಬಿಜೋಯ್ ಅವರನ್ನು ಆಯ್ಕೆ ಮಾಡಲಾಗಿದೆ. ಸಾಮಾನ್ಯವಾಗಿ ತವರಿನಲ್ಲಿ ಬಲಿಷ್ಠ ಶಕ್ತಿಯಾಗಿರುವ ಬಾಂಗ್ಲಾದೇಶ ಈ ವರ್ಷ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿ ಸೋಲುಂಡಿತ್ತು. ಕೊನೆಯಲ್ಲಿ ಐರ್ಲೆಂಡ್​ ವಿರುದ್ಧ ವಿಜಯ ಸಾಧಿಸಿತು.

ನಾಯಕ ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ ಮತ್ತು ನಜ್ಮುಲ್ ಶಾಂಟೊ ಈ ವರ್ಷ 400ಕ್ಕೂ ಹೆಚ್ಚು ರನ್ ಗಳಿಸಿದರೆ, ಯುವ ಆಟಗಾರ ತೌಹಿದ್ ಕೂಡ 300ಕ್ಕೂ ಹೆಚ್ಚು ರನ್ ಗಳಿಸಿರುವುದು ತಂಡಕ್ಕೆ ಭರವಸೆಯಾಗಿದೆ. ಆದರೆ ಈ ರೀತಿಯ ಪ್ರದರ್ಶನ ಐರ್ಲೆಂಡ್​ ವಿರುದ್ಧ ಎಂಬುದು ಗಮನಾರ್ಹ. ಅನುಭವಿ ಮುಸ್ತಾಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ ಮತ್ತು ತಸ್ಕಿನ್ ಅಹ್ಮದ್ ಬೌಲಿಂಗ್​ನಲ್ಲಿ ಕಮಾಲ್​ ಮಾಡಬೇಕಿದೆ. ಬೌಲರ್​ಗಳೂ ಇಂಗ್ಲೆಂಡ್​ ಮತ್ತು ಭಾರತದ ಮೇಲೆ ಪ್ರಭಾವ ಬೀರಿಲ್ಲ. ಎರಡೂ ತಂಡಗಳು ಈ ಎಲ್ಲಾ ಸಮಸ್ಯೆಗಳನ್ನು ಮೀರಿ ಗೆಲುವಿಗಾಗಿ ಹೋರಾಡಬೇಕಿದೆ.

ಶ್ರೀಲಂಕಾದಲ್ಲಿ ಮಳೆಯಾಗುವ ಮುನ್ಸೂಚನೆ ಇದ್ದು, ಟಾಸ್​ ಗೆದ್ದವರು ಬೌಲಿಂಗ್​ ಆಯ್ಕೆ ಮಾಡಿಕೊಂಡರೆ ಎರಡನೇ ಇನ್ನಿಂಗ್ಸ್​ನಲ್ಲಿ ರನ್​ರೇಟ್​ ಆಧಾರದಲ್ಲಿ ಬ್ಯಾಟ್​ ಮಾಡಲು ಅನುಕೂಲ ಆಗಲಿದೆ. ಈ ಪಂದ್ಯ ಗೆದ್ದವರಿಗೆ ಮತ್ತು ಸೋತವರಿಗೆ ಅಫ್ಘಾನಿಸ್ತಾನ ಎರಡನೇ ಎದುರಾಳಿ ಆಗಿರಲಿದೆ.

ಸಂಭಾವ್ಯ ತಂಡಗಳು ಇಂತಿವೆ.. ಶ್ರೀಲಂಕಾ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದಸುನ್ ಶನಕ (ನಾಯಕ), ದುಶನ್ ಹೇಮಂತ, ಮಹೇಶ್ ತೀಕ್ಷಣ, ಮತೀಶ ಪತಿರಣ, ಕಸುನ್ ರಜಿತ

ಬಾಂಗ್ಲಾದೇಶ:ತಂಝಿದ್ ತಮೀಮ್, ನೈಮ್ ಶೇಖ್, ನಜ್ಮುಲ್ ಹೊಸೈನ್, ತೌಹಿದ್ ಹೃದಯೋಯ್, ಶಾಕಿಬ್ ಅಲ್ ಹಸನ್(ನಾಯಕ), ಮುಶ್ಫಿಕರ್ ರಹೀಮ್, ಮೆಹಿದಿ ಹಸನ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರೆಹಮಾನ್/ ಶೋರಿಫುಲ್ ಇಸ್ಲಾಂ.

ಪಂದ್ಯ:ಮಧ್ಯಾಹ್ನ 3ಕ್ಕೆ (ಭಾರತೀಯ ಕಾಲಮಾನ), ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಶ್ರೀಲಂಕಾ.

ಇದನ್ನೂ ಓದಿ:ಏಷ್ಯಾಕಪ್‌: ಬಾಬರ್​, ಇಫ್ತಿಕರ್​ ಶತಕದಾಟ; ಪಾಕಿಸ್ತಾನ ನೀಡಿದ ಈ ಗುರಿ ಸಾಧಿಸುವುದೇ ನೇಪಾಳ?

ABOUT THE AUTHOR

...view details