ಕೊಲಂಬೊ (ಶ್ರೀಲಂಕಾ): ಇಂದಿನಿಂದ ಆರಂಭವಾಗಲಿರುವ ಏಷ್ಯಾಕಪ್ಗೆ ಶ್ರೀಲಂಕಾ ತಡವಾಗಿ ತಂಡವನ್ನು ಪ್ರಕಟಿಸಿದೆ. ಅನಾರೋಗ್ಯ ಮತ್ತು ಗಾಯಾಳುಗಳ ಸಮಸ್ಯೆಯನ್ನು ಎದುರಿಸುತ್ತಿರುವ ಸಿಂಹಳೀಯರು ಹಲವಾರು ಪ್ರಮುಖ ಆಟಗಾರರನ್ನು ಕೈಬಿಟ್ಟು ಹೊಸಬರಿಗೆ ಮಣೆ ಹಾಕಬೇಕಾಗಿದೆ. ನಿನ್ನೆ (ಮಂಗಳವಾರ) ಏಷ್ಯಾಕಪ್ 2023 ಗಾಗಿ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಲೆಗ್ ಸ್ಪಿನ್ನರ್ ಮತ್ತು ಆಲ್‌ರೌಂಡರ್ ವನಿಂದು ಹಸರಂಗಾ ತಂಡದಿಂದ ಹೊರಗಿದ್ದಾರೆ.
ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಸರಂಗ ಏಷ್ಯಾಕಪ್ನ ನಡುವೆಯೂ ತಂಡವನ್ನು ಸೇರುತ್ತಿಲ್ಲ. ಅವರ ಜೊತೆಗೆ ವೇಗಿಗಳಾದ ದುಷ್ಮಂತ ಚಮೀರ, ಲಹಿರು ಮಧುಶಂಕ ಮತ್ತು ಲಹಿರು ಕುಮಾರ ಕೂಡ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಈ ಪ್ರಮುಖ ನಾಲ್ವರ ಬದಲಿಯಾಗಿ ಬಿನೂರ ಫೆರ್ನಾಂಡೋ ಮತ್ತು ಪ್ರಮೋದ್ ಮಧುಶನ್ ತಂಡವನ್ನು ಸೇರಿಕೊಂಡಿದ್ದಾರೆ. ಕುಸಾಲ್ ಪೆರೇರಾ ಏಕದಿನ ತಂಡದಿಂದ ಎರಡು ವರ್ಷದ ನಂತರ ಮರಳಿದ್ದು, ಅವರಿನ್ನೂ ಜ್ವರದಿಂದ ಬಳಲುತ್ತಿದ್ದಾರೆ. ಆದರೆ, ಅವರು ಗುಣಮುಖರಾಗಿ ತಂಡ ಸೇರಿಕೊಳ್ಳಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ಹೇಳಿದೆ.
ಇತ್ತಿಚೆಗೆ ನಡೆದ ಶ್ರೀಲಂಕಾ ಪ್ರೀಮಿಯರ್ ಲೀಗ್ 2023ರಲ್ಲಿ ಲಂಕಾದ ಪ್ರಮುಖ ಆಟಗಾರರು ಗಾಯಕ್ಕೆ ತುತ್ತಾಗಿದ್ದಾರೆ. ವನಿಂದು ಹಸರಂಗ ಎಲ್‌ಪಿಎಲ್ ಸಮಯದಲ್ಲಿ ತೊಡೆಯ ಭಾಗದ ಗಾಯಕ್ಕೆ ಒಳಗಾಗಿದ್ದರು, ಇದರಿಂದ ಎಲ್‌ಪಿಎಲ್ ಲೀಗ್ನಿಂದ ಹೊರಗುಳಿಯಬೇಕಾಯಿತು. ಪುನರ್ವಸತಿಯಲ್ಲಿರುವ ಹಸರಂಗ ಸಂಪೂರ್ಣ ಚೇತರಿಸಿಕೊಳ್ಳದಿರುವುದರಿಂದ ಏಷ್ಯಾಕಪ್ನಿಂದಲೂ ಹೊರಗುಳಿಯ ಬೇಕಾದ ಪ್ರಸಂಗ ಬಂದಿದೆ. ವಿಶ್ವಕಪ್ ವೇಳೆಗೆ ತಂಡಕ್ಕೆ ಮರಳುವ ನಿರೀಕ್ಷೆ ಇದೆ. ಚಮೀರಾಗೆ ಎದೆಯ ಭಾಗದ ಸ್ನಾಯುವಿನಲ್ಲಿ ನೋವು ಕಾಣಿಸಿಕೊಂಡಿದೆ. ಕಳೆದ ವಾರ ಅಭ್ಯಾಸ ಪಂದ್ಯದ ವೇಳೆ ಮಧುಶಂಕ ಗಾಯಕ್ಕೆ ತುತ್ತಾಗಿದ್ದಾರೆ. ಲಹಿರು ಕುಮಾರ್ ಅವರು ಪಕ್ಕೆಲುಬಿನ ನೋವಿನಿಂದ ಬಳಲುತ್ತಿದ್ದಾರೆ. ತಂಡದ ನಾಯಕತ್ವವನ್ನು ದಸುನ್ ಶನಕ ವಹಿಸಿದ್ದು, ಕುಸಾಲ್ ಮೆಂಡಿಸ್ ಉಪನಾಯಕನ ಪಾತ್ರವನ್ನು ನಿರ್ವಹಿಸಲಿದ್ದಾರೆ.