ನವದೆಹಲಿ:ಸನ್ರೈಸರ್ಸ್ ಹೈದರಾಬಾದ್ ಮ್ಯಾನೇಜ್ಮೆಂಟ್ ತಮ್ಮನ್ನು ನಾಯಕತ್ವದಿಂದ ಏಕೆ ವಜಾಗೊಳಿಸಿದೆ ಎಂಬುದಕ್ಕೆ ಯಾವುದೇ ಕಾರಣವನ್ನು ನೀಡಲಿಲ್ಲ ಎಂದು ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಮಂಗಳವಾರ ಬಹಿರಂಗಪಡಿಸಿದ್ದಾರೆ.
ವಾರ್ನರ್ ಅವರನ್ನು ಫ್ರಾಂಚೈಸಿ ಐಪಿಎಲ್ ಮಧ್ಯೆಯೆ ನಾಯಕತ್ವದಿಂದ ವಜಾಗೊಳಿಸಿ ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ನಾಯಕನನ್ನಾಗಿ ನೇಮಿಸಿತ್ತು. ಆದರೆ, ನಾಯಕತ್ವ ಬದಲಾವಣೆ ಫ್ರಾಂಚೈಸಿಗೆ ಯಾವುದೇ ಅದೃಷ್ಟವನ್ನು ತಂದುಕೊಡಲಿಲ್ಲ. ಆಡಿದ 14 ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿತ್ತು.
ಫ್ರಾಂಚೈಸಿ ಮಾಲೀಕರು, ಕೋಚ್ಗಳಾದ ಟ್ರೆವರ್ ಬೈಲಿಸ್, ಲಕ್ಷ್ಮಣ್, ಮೂಡಿ ಮತ್ತು ಮುರಳಿ ಎಲ್ಲರೂ ನಿರ್ಧಾರವನ್ನು ತೆಗೆದುಕೊಂಡಾಗ ಅದು ಸರ್ವಾನುಮತದ ನಿರ್ಧಾರವಾಗಿರಬೇಕು ಎಂದು ಭಾವಿಸಿದೆ. ಆದರೆ, ಅಲ್ಲಿ ಯಾವ ವ್ಯಕ್ತಿ ನಿಮ್ಮ ಪರವಾಗಿದ್ದಾರೆ, ಯಾರು ನಿಮ್ಮ ಪರ ಇಲ್ಲ ಎಂಬುದು ತಿಳಿಯಲು ಸಾಧ್ಯವಾಗಲಿಲ್ಲ "ಎಂದು ವಾರ್ನರ್ ಹೇಳಿದ್ದಾರೆ.
ನನ್ನೇಕೆ ಕೆಳಗಿಳಿಸಿದಿರಿ?
ಆದರೆ ನನಗೆ ನಿರಾಸದಾಯಕ ವಿಷಯವೆಂದರೆ, ನನ್ನನ್ನು ಏಕೆ ನಾಯಕತ್ವದಿಂದ ಕೆಳಗಿಳಿಸಲಾಗುತ್ತಿದೆ ಎಂಬುದನ್ನು ಅವರು ಮನವರಿಕೆ ಮಾಡಲಿಲ್ಲ. ಕೇವಲ ಫಾರ್ಮ್ನಲ್ಲಿಲ್ಲ ಎಂಬುದೇ ಕಾರಣವಾದರೆ, ಅದು ಸ್ವೀಕರಿಸಲು ಕಷ್ಟಕರವಾದದ್ದು. ಏಕೆಂದರೆ ನೀವು ಹಿಂದೆ ನಾನು ತಂಡಕ್ಕಾಗಿ ಏನೂ ಮಾಡಿದೆ ಎಂಬುದನ್ನು ನೋಡಿದಾಗ ಅದಕ್ಕೆ ಸ್ವಲ್ಪ ತೂಕವಿರುತ್ತದೆ ಎಂದು ನೀವು ಭಾವಿಸುವಿರಿ ಎಂದು ವಾರ್ನರ್ ತಿಳಿಸಿದ್ದಾರೆ.