ರಾಜ್ ಕೋಟ್: ಕೇರಳ ತಂಡದ ವೇಗಿ ಎಸ್.ಶ್ರೀಶಾಂತ್ ನಿಷೇಧ ಮುಕ್ತರಾದ ನಂತರ ಮೊದಲ ಬಾರಿಗೆ ರಣಜಿ ಕ್ರಿಕೆಟ್ ಆಡುತ್ತಿದ್ದು, ಕಳೆದ ವಾರ ಮೇಘಾಲಯ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 9 ವರ್ಷಗಳ ನಂತರ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ವಿಕೆಟ್ ಪಡೆದಿದ್ದರು. ಈ ವಿಕೆಟ್ ಪಡೆಯುತ್ತಿದ್ದಂತೆ ಶ್ರೀಶಾಂತ್ ಕ್ರಿಕೆಟ್ ಪಿಚ್ಗೆ ನಮಸ್ಕರಿಸಿ ಮುತ್ತಿಟ್ಟು ಸಂಭ್ರಮಿಸಿದ್ದರು.
ಮೇಘಾಲಯದ ಬ್ಯಾಟರ್ ಆರ್ಯನ್ ಬೋರಾ ವಿಕೆಟ್ ಪಡೆದಿದ್ದ ವಿಡಿಯೋವನ್ನು ಶ್ರೀಶಾಂತ್ ಬುಧವಾರ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ " ಅದು 9 ವರ್ಷಗಳ ನಂತರ ನನ್ನ ಮೊದಲ ವಿಕೆಟ್ ಆಗಿದೆ. ದೇವರ ದಯೆಗೆ ನಾನು ತುಂಬಾ ಸಂತೋಷಪಟ್ಟೆ ಮತ್ತು ಅದಕ್ಕಾಗಿ ನಾನು ಪಿಚ್ಗೆ ನನ್ನ ಪ್ರಣಾಮವನ್ನು ಅರ್ಪಿಸಿದೆ" ಎಂದು ಶ್ರೀಶಾಂತ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.