ನವದೆಹಲಿ:2025ರ ಐಸಿಸಿ ಚಾಂಪಿಯನ್ ಟ್ರೋಫಿ (2025 ICC Champions Trophy) ಪಾಕಿಸ್ತಾನದಲ್ಲಿ ಆಯೋಜನೆ ಮಾಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಿರ್ಧಾರ ಕೈಗೊಂಡಿದ್ದು, ಇದರ ಬಗ್ಗೆ ಕೇಂದ್ರ ಕ್ರೀಡಾ ಮಂತ್ರಿ ಅನುರಾಗ್ ಠಾಕೂರ್ ಮಾತನಾಡಿದ್ದಾರೆ.
ಸುದ್ದಿಗಾರರು ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಠಾಕೂರ್ (Sports Minister Anurag Thakur), ಸಮಯ ಬಂದಾಗ ಕೇಂದ್ರ ಮತ್ತು ಗೃಹ ಸಚಿವಾಲಯ ನಿರ್ಧಾರ ಕೈಗೊಳ್ಳಲಿದೆ ಎಂದರು.
ಅಂತಾರಾಷ್ಟ್ರೀಯ ತಂಡಗಳು ನೆರೆಯ ದೇಶಕ್ಕೆ ಪ್ರವಾಸ ಕೈಗೊಳ್ಳಲು ಅಲ್ಲಿನ ಭದ್ರತಾ ಸಮಸ್ಯೆ ಅಡ್ಡಿಯಾಗುತ್ತಿದೆ. ಈ ಹಿಂದೆ ಭದ್ರತೆಯ ಕಾರಣದಿಂದಲೇ ಅನೇಕ ದೇಶಗಳು ಅಲ್ಲಿಗೆ ಹೋಗುವುದರಿಂದ ಹಿಂದೆ ಸರಿದಿವೆ. ಅಲ್ಲಿ ಆಟವಾಡುವಾಗಲೇ ಕ್ರಿಕೆಟರ್ಸ್ ಮೇಲೆ ದಾಳಿ ನಡೆದಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿ (ICC Tournament) ನಡೆಯುವಾಗ ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸಮಯ ಬಂದಾಗ ಏನು ಮಾಡಬೇಕೆಂದು ನಾವು ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಭಾರತ-ಶ್ರೀಲಂಕಾದೊಂದಿಗೆ ಸೇರಿ 1996ರಲ್ಲಿ ಪಾಕ್ ಕೊನೆಯದಾಗಿ ವಿಶ್ವಕಪ್ ಆಯೋಜನೆ ಮಾಡಿತ್ತು. ಇದಾದ ಬಳಿಕ 2009ರಲ್ಲಿ ಲಾಹೋರ್ನಲ್ಲಿ ಶ್ರೀಲಂಕಾ ಕ್ರಿಕೆಟರ್ಸ್ (Srilanka Crickters) ತಂಡದ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. ಇತ್ತೀಚೆಗಷ್ಟೇ, ಭದ್ರತಾ ಕಾರಣದಿಂದಾಗಿ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ಕೂಡ ತಮ್ಮ ದ್ವಿಪಕ್ಷೀಯ ಪ್ರವಾಸದಿಂದ ಹಿಂದೆ ಸರಿದಿವೆ.
ಇದನ್ನೂ ಓದಿ:ಮಿಂಚಿದ ಗಪ್ಟಿಲ್, ಚಾಪ್ಮನ್: ಭಾರತಕ್ಕೆ 165 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದ ಕಿವೀಸ್
ಭಾರತ 2012ರಿಂದಲೂ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಿಲ್ಲ. ಆದರೆ ಐಸಿಸಿ ಟೂರ್ನಮೆಂಟ್ನಲ್ಲಿ ಮಾತ್ರ ಉಭಯ ದೇಶಗಳು ಭಾಗಿಯಾಗುತ್ತಿವೆ.