ನವದೆಹಲಿ:ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್ ಮಹತ್ತರ ಸಾಧನೆ ಮಾಡಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ 100 ವಿಕೆಟ್ ಪಡೆದ ಆಸ್ಟ್ರೇಲಿಯಾದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಲಿಯಾನ್ ಪಾತ್ರರಾದರು. ಅಲ್ಲದೇ, ಈ ಸಾಧನೆ ಮಾಡಿದ ಮೂರನೇ ಬೌಲರ್ ಎನಿಸಿಕೊಂಡರು.
ನಾಥನ್ ಲಿಯಾನ್‌ಗಿಂತ ಮೊದಲು ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಮತ್ತು ಬೌಲರ್ ರವಿಚಂದ್ರನ್ ಅಶ್ವಿನ್ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ 100 ವಿಕೆಟ್‌ಗಳನ್ನು ಪಡೆದಿದ್ದಾರೆ. ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಹೆಸರಿನಲ್ಲಿದೆ. ಕುಂಬ್ಳೆ ಒಟ್ಟಾರೆ 111 ವಿಕೆಟ್ ಪಡೆದಿದ್ದಾರೆ.
2 ನೇ ಟೆಸ್ಟ್ ಮೊದಲ ದಿನದಂದು ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕಾಂಗರೂ ಪಡೆಯ ಅಲೆಕ್ಸ್ ಕ್ಯಾರಿ ವಿಕೆಟ್ ಪಡೆಯುವ ಮೂಲಕ 100 ನೇ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇಂದಿನ ಎರಡನೇ ದಿನದಾಟದಲ್ಲಿ ನಾಥನ್ ಲಿಯಾನ್ 100 ನೇ ವಿಕೆಟ್ ಪಡೆದರು. ಮೂರನೇ ಮತ್ತು ಮೊದಲ ಆಸ್ಟ್ರೇಲಿಯಾದ ಬೌಲರ್ ಎನಿಸಿಕೊಂಡಿದ್ದಾರೆ.
ಲಿಯಾನ್ ಮಾರಕ ಬೌಲಿಂಗ್ ದಾಳಿ:ಬಾರ್ಡರ್ ಗವಾಸ್ಕರ್ ಸರಣಿಯ 20ನೇ ಪಂದ್ಯವನ್ನಾಡುತ್ತಿರುವ ನಾಥನ್ ಲಿಯಾನ್ ಎರಡನೇ ಟೆಸ್ಟ್ನ 2ನೇ ದಿನದಂದು ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರಾ, ಶ್ರೇಯಸ್ ಅಯ್ಯರ್, ವಿಕೆಟ್ ಕೀಪರ್ ಶ್ರೀಕರ್ ಭರತ್ ಸೇರಿ 5 ವಿಕೆಟ್ ಪಡೆಯುವ ಮೂಲಕ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಅದರಲ್ಲೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಶ್ರೀಕರ್ ಭರತ್ ಅವರ ವಿಕೆಟ್ ಪಡೆದ ನಂತರ ಲಿಯಾನ್ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ 100 ನೇ ವಿಕೆಟ್ ಪಡೆದ ಸಾಧನೆ ಮಾಡಿದರು.