ದುಬೈ :ಇಂದರ್ಬೀರ್ ಸಿಂಗ್ ಸೋಧಿ ಅಥವಾ ಇಶ್ ಸೋಧಿ ಹೆಸರನ್ನು ಭಾರತ ತಂಡ ಮತ್ತು ವಿರಾಟ್ ಕೊಹ್ಲಿ ಬಹುಕಾಲ ನೆನಪಿನಲ್ಲಿರಿಸಿಕೊಳ್ಳಬೇಕು.
ಯಾಕೆಂದರೆ, ವಿಶ್ವಕಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಲು ಮಾಡು ಇಲ್ಲವೇ ಮಡಿ ಎಂಬಂತಿದ್ದ ಪಂದ್ಯದಲ್ಲಿ ಭಾರತದ ಪ್ರಮುಖ ಬ್ಯಾಟರ್ಗಳಿಗೆ ಪೆವಿಲಿಯನ್ ದಾರಿ ತೋರಿಸುವ ಮೂಲಕ ಈ 29 ವರ್ಷದ ಭಾರತೀಯ ಮೂಲದ ಬೌಲರ್ ತಮ್ಮ ಜನ್ಮದಿನದಂದು ಭಾರತೀಯರ ಕನಸನ್ನು ನುಚ್ಚು ನೂರು ಮಾಡಿದರು.
ಲೂದಿಯಾನದಲ್ಲಿ ಜನಿಸಿ ನ್ಯೂಜಿಲ್ಯಾಂಡ್ನಲ್ಲಿ ನೆಲೆಸಿರುವ ಸೋಧಿ ಭಾನುವಾರ ನಡೆದ ಪಂದ್ಯದಲ್ಲಿ ಕೇವಲ ವಿಕೆಟ್ ಪಡೆದು ಮಾತ್ರ ಭಾರತಕ್ಕೆ ಆಘಾತ ನೀಡಲಿಲ್ಲ. ಬದಲಾಗಿ 4 ಓವರ್ಗಳಲ್ಲಿ 17 ರನ್ ನೀಡಿ ರನ್ಗತಿಗೂ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.
ಅವರು ಭಾರತದ ಬೆನ್ನೆಲುಬಾಗಿದ್ದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ವಿಕೆಟ್ ಪಡೆದು 2007ರ ಚಾಂಪಿಯನ್ ತಂಡವನ್ನು 110 ರನ್ಗಳಿಗೆ ಕಟ್ಟಿ ಹಾಕುವ ಮೂಲಕ 2021ರ ವಿಶ್ವಕಪ್ನಿಂದ ಗುಂಪು ಹಂತದಲ್ಲೇ ಹೊರ ಬೀಳುವಂತೆ ಮಾಡಿದರು. ವಿಲಿಯಮ್ಸನ್ ಪಡೆ ಈ ಮೊತ್ತವನ್ನು ಕೇವಲ 14.3 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪಿತು.
ಯೂಟ್ಯೂಬ್ ನೋಡಿ ಸ್ಪಿನ್ ಕಲಿತ ಸೋಧಿ
ಭಾರತಕ್ಕೆ ಆಘಾತಕಾರಿ ಸೋಲುಣಿಸಲು ಕಿವೀಸ್ಗೆ ನೆರವಾಗಿದ್ದ ಇಶ್ ಸೋಧಿ ಲೆಗ್ಸ್ಪಿನ್ ಬೌಲಿಂಗ್ ಕೌಶಲ್ಯ ಕಲಿತದ್ದು ಯೂಟ್ಯೂಬ್ ನೋಡಿ ಎನ್ನುವುದು ವಿಶೇಷ. ಶೇನ್ ವಾರ್ನ್, ಸ್ಟುವರ್ಟ್ ಮೆಕ್ಗಿಲ್ ಮತ್ತು ಅನಿಲ್ ಕುಂಬ್ಳೆ ಅವರ ಬೌಲಿಂಗ್ ವಿಡಿಯೋವನ್ನು ನೋಡಿ ಲೆಗ್ ಸ್ಪಿನ್ ಕೌಶಲ್ಯಗಳನ್ನು ಕಲಿತಿದ್ದಾರೆ. ಇವರಿಗೆ ಮಾಜಿ ಕಿವೀಸ್ ಆಲ್ರೌಂಡರ್ ದೀಪಕ್ ಪಟೇಲ್ ಮಾರ್ಗದರ್ಶಕರಾಗಿ, ಸೋಧಿ ಇಂದು ಒಬ್ಬ ಕೌಶಲ್ಯಯುತ ಬೌಲರ್ ಆಗಲು ನೆರವಾಗಿದ್ದಾರೆ.
ನ್ಯೂಜಿಲ್ಯಾಂಡ್ ತಂಡದ ಬೌಲಿಂಗ್ ಘಟಕದ ಕಡೆ ಒಮ್ಮೆ ನೋಡಿದಾಗ ಟ್ರೆಂಟ್ ಬೌಲ್ಟ್ ಮತ್ತು ಟಿಮ್ ಸೌಥಿ ತಂಡದ ಸ್ಟಾರ್ ಬೌಲರ್ಗಳಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ, ಸೋಧಿ ಭಾನುವಾರ ತಂಡದಲ್ಲಿ ತಮ್ಮ ಪಾತ್ರ ಎಂತಹ ಮಹತ್ವ ಪಡೆದಿದೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಇದನ್ನು ತಂಡದ ನಾಯಕ ಕೇನ್ ವಿಲಿಯಮ್ಸನ್ ಕೂಡ ಒಪ್ಪಿಕೊಂಡಿದ್ದು, ಸೋಧಿ ತಂಡದ ಪ್ರಮುಖ ಆಟಗಾರ ಎಂದಿದ್ದಾರೆ.
"ಇಶ್ ಮಹೋನ್ನತ ಟಿ20 ಮತ್ತು ವೈಟ್ ಬಾಲ್ ಬೌಲರ್. ಅವರು ದೀರ್ಘ ಸಮಯದಿಂದ ನಮ್ಮ ತಂಡದ ದೊಡ್ಡ ಭಾಗವಾಗಿದ್ದಾರೆ. ಅವರೂ ವಿಶ್ವದಾದ್ಯಂತ ಹಲವಾರು ಟೂರ್ನಿಗಳಲ್ಲಿ ಆಡಿದ್ದು, ಅತ್ಯುತ್ತಮ ಅನುಭವ ಹೊಂದಿದ್ದಾರೆ. ಸೋಧಿ ಮತ್ತು ಮಿಚೆಲ್ ಸ್ಯಾಂಟ್ನರ್ ಇಂತಹ ಪರಿಸ್ಥಿತಿಗಳಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ" ಎಂದು ಭಾರತವನ್ನು ಮಣಿಸಿದ ನಂತರ ವಿಲಿಯಮ್ಸನ್ ಹೇಳಿದ್ದಾರೆ.
ಯುಎಇಯಲ್ಲಿನ ವಿಕೆಟ್‌ಗಳು ಸ್ಪಿನ್‌ಗೆ ಅನುಕೂಲಕರವಾಗಿರುವುದರಿಂದ, ನಿಧಾನಗತಿಯ ಬೌಲರ್‌ಗಳು ಟೂರ್ನಿಯಲ್ಲಿ ಭಾರಿ ಪ್ರಭಾವ ಬೀರಲಿದ್ದಾರೆ ಎಂಬುದು ಹೆಚ್ಚು ಸ್ಪಷ್ಟವಾಗಿದೆ. ಅವರಲ್ಲಿ ಇಶ್ ಸೋಧಿ ಕೂಡ ಅತ್ಯುತ್ತಮವಾದ ಬೌಲರ್ ಎಂದು ಪ್ರದರ್ಶನದ ಮೂಲಕ ಮತ್ತೆ ಮತ್ತೆ ಸಾಬೀತುಪಡಿಸಿದ್ದಾರೆ. ಪ್ರಸ್ತುತ ಸಕ್ರಿಯ ಸ್ಪಿನ್ ಬೌಲರ್ಗಳಲ್ಲಿ ಆಫ್ಘಾನಿಸ್ತಾನದ ರಶೀದ್ ಖಾನ್ ಮತ್ತು ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಮಾತ್ರ ಟಿ20 ಕ್ರಿಕೆಟ್ನಲ್ಲಿ ಸೋಧಿ(77) ಅವರಗಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ.
ಆದರೂ ಸೋಧಿಗೆ ವಿಶ್ವ ಕ್ರಿಕೆಟ್ನಲ್ಲಿ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ. ಆದರೆ, ನಿನ್ನೆಯ ಪಂದ್ಯದಲ್ಲಿ 2 ಪ್ರಮುಖ ವಿಕೆಟ್ ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ವಿಶ್ವಕ್ರಿಕೆಟ್‌ನಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ.
ಇದನ್ನು ಓದಿ:T20 ವಿಶ್ವಕಪ್: 2ನೇ ಪಂದ್ಯದಲ್ಲಿ ಕಳಪೆ ಪ್ರದರ್ಶನಕ್ಕೆ ಸೇಹ್ವಾಗ್ ಬೇಸರ.. ಟೀಕಿಸಬೇಡಿ ಎಂದ ಟರ್ಬನೇಟರ್