ಬೆಂಗಳೂರು:ಮಳೆ ಕಾಟ ಮತ್ತು ಸೋಲಿನ ಭೀತಿ ನಡುವೆ ಪುಟಿದೆದ್ದು ಆಡಿದ ದಕ್ಷಿಣ ವಲಯ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ತಲುಪಿತು. ಸಾಯಿ ಕಿಶೋರ್ ಅವರ ಅಮೋಘ ಆಲ್ರೌಂಡರ್ ಪ್ರದರ್ಶನ ತಂಡ ಅಂತಿಮಘಟ್ಟ ತಲುಪುವಂತೆ ಮಾಡಿತು. ಇತ್ತ ಪಶ್ಚಿಮ ವಲಯ ಮತ್ತು ಕೇಂದ್ರ ವಲಯ ಮಧ್ಯೆ ನಡೆದ ಮೊದಲ ಸೆಮಿಫೈನಲ್ ಹಣಾಹಣಿಯು ಮಳೆಯಿಂದಾಗಿ ಡ್ರಾಗೊಂಡಿತು. ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಪಶ್ಚಿಮ ವಲಯ ಫೈನಲ್ಗೆ ಲಗ್ಗೆ ಇಟ್ಟಿತು. ಹೀಗಾಗಿ ದಕ್ಷಿಣ ವಲಯ ಮತ್ತು ಪಶ್ಚಿಮ ವಲಯ ಸತತ ಎರಡನೇ ಬಾರಿಗೆ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.
24ನೇ ಸಲ ಫೈನಲ್ಗೆ ದಕ್ಷಿಣ ವಲಯ ಪ್ರವೇಶ :ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯಕ್ಕೆ ಪದೇ ಪದೇ ಮಳೆ ಅಡ್ಡಿಯುಂಟು ಮಾಡಿತು. ಮೊದಲ ಇನಿಂಗ್ಸ್ನಲ್ಲಿ 3 ರನ್ಗಳ ಮುನ್ನಡೆ ಪಡೆದಿದ್ದ ಪಶ್ಚಿಮ ವಲಯ 2ನೇ ಇನಿಂಗ್ಸ್ನಲ್ಲಿ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾಯಿತು. ಪ್ರಭಸಿಮ್ರಾನ್ ಸಿಂಗ್ ಅರ್ಧಶತಕದ (63) ಬಲದಿಂದ 211 ಗಳಿಸಿತು. ಇದರಿಂದ ದಕ್ಷಿಣ ವಲಯದ ಗೆಲುವಿಗೆ 215 ರನ್ಗಳ ಗುರಿ ನೀಡಿತು. ಮೂರನೇ ದಿನದ ಅಂತ್ಯಕ್ಕೆ 21 ರನ್ ಗಳಿಸಿದ್ದ ದಕ್ಷಿಣ ವಲಯ ಅಂತಿಮ ದಿನವಾದ ನಿನ್ನೆ 194 ರನ್ ಮಾಡಬೇಕಿತ್ತು. ಮೊದಲ ಇನಿಂಗ್ಸ್ನಲ್ಲಿ ಅರ್ಧಶತಕ ಸಿಡಿಸಿದ್ದ ಕರ್ನಾಟಕದ ಮಯಾಂಕ್ ಅಗರ್ವಾಲ್ ಮತ್ತೊಂದು ಅರ್ಧಶತಕ (54) ಬಾರಿಸಿ ನೆರವಾದರು.
ಹನುಮ ವಿಹಾರಿ 43, ರಿಕ್ಕಿ ಬುಯಿ 34, ತಿಲಕ್ ವರ್ಮಾ 25 ರನ್ ಗಳಿಸಿದರು. ತಂಡ ಗೆಲುವಿನ ಹಂತದಲ್ಲಿದ್ದಾಗ ದಿಢೀರ್ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಈ ವೇಳೆ ತಮಿಳುನಾಡಿನ ಸಾಯಿ ಕಿಶೋರ್ 11 ಎಸೆತಗಳಲ್ಲಿ 2 ಸಿಕ್ಸರ್ ಸಮೇತ ಅಜೇಯ 15 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು. ಈ ಮೂಲಕ 24ನೇ ಬಾರಿಗೆ, ಸತತ ಎರಡನೇ ಬಾರಿಗೆ ಫೈನಲ್ ಹಂತ ಮುಟ್ಟಿತು. ಉತ್ತರ ವಲಯ ಮೊದಲ ಇನಿಂಗ್ಸ್ನಲ್ಲಿ 198, 2ನೇ ಇನಿಂಗ್ಸ್ನಲ್ಲಿ 211 ರನ್ ಮಾಡಿದರೆ, ದಕ್ಷಿಣ ವಲಯ ಮೊದಲ ಇನಿಂಗ್ಸ್ 195, 2ನೇ ಇನಿಂಗ್ಸ್ನಲ್ಲಿ 219 ರನ್ ಗಳಿಸಿ ಪಂದ್ಯ ಗೆದ್ದುಕೊಂಡಿತು.