ಹೈದರಾಬಾದ್:ದಕ್ಷಿಣ ಆಫ್ರಿಕಾ - ಆಸ್ಟ್ರೇಲಿಯಾ ನಡುವೆ ಜನವರಿ 12,14 ಮತ್ತು 17ರಂದು ನಡೆಯಬೇಕಾಗಿದ್ದ ಏಕದಿನ ಕ್ರಿಕೆಟ್ ಸರಣಿ ರದ್ದುಗೊಂಡಿದೆ. ಹೀಗಾಗಿ, ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಹರಿಣಗಳ ತಂಡ ನೇರವಾಗಿ ಅರ್ಹತೆ ಪಡೆದುಕೊಳ್ಳುವುದು ಡೌಟ್ ಎಂದು ಹೇಳಲಾಗ್ತಿದೆ. ಆಸ್ಟ್ರೇಲಿಯಾ ಪ್ರವಾಸದಿಂದ ದಕ್ಷಿಣ ಆಫ್ರಿಕಾ ಹಿಂದೆ ಸರಿದಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಣೆ ಹೊರಡಿಸಿದ್ದು, ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾದ ಏಕದಿನ ವಿಶ್ವಕಪ್ ಹಾದಿ ದುರ್ಗಮವಾಗಿದೆ.
ದಕ್ಷಿಣ ಆಫ್ರಿಕಾ ಜನವರಿ ತಿಂಗಳಲ್ಲಿ ದೇಶೀಯ ಟಿ-20 ಕ್ರಿಕೆಟ್ ಲೀಗ್ನಲ್ಲಿ ಭಾಗಿಯಾಗಲಿದೆ. ಹೀಗಾಗಿ, ದಿನಾಂಕ ಬದಲಾವಣೆ ಮಾಡುವಂತೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ ಮನವಿ ಮಾಡಿಕೊಂಡಿತ್ತು. ಆದರೆ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಳಾಪಟ್ಟಿ ಈಗಾಗಲೇ ಸಿದ್ಧಗೊಂಡಿದ್ದು, ಅದರಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಉಭಯ ತಂಡಗಳ ನಡುವಿನ ಈ ಏಕದಿನ ಸರಣಿ ಐಸಿಸಿ ಸೂಪರ್ ಲೀಗ್ನ ಭಾಗವಾಗಿದ್ದು, 2023ರ ವಿಶ್ವಕಪ್ಗೆ ನೇರ ಅರ್ಹತೆ ನಿರ್ಧರಿಸುವ ಭಾಗವಾಗಿತ್ತು.